ಹಾಲಿವುಡ್….ವಿಶ್ವ ಸಿನಿ ಜಗತ್ತಿನ ಪಾಠ ಶಾಲೆ ಅಂತಲೇ ಕರೆಯಿಸಿಕೊಳ್ಳುವ ಈ ಹಾಲಿವುಡ್ ಏನನ್ನೇ ಮಾಡಿದರೂ ಅಲ್ಲೊಂದು ವಿಶೇಷ ಇದ್ದೇ ಇರುತ್ತೆ. ಈ ಹಿಂದೆ ಜುರಾಸಿಕ್ ಪಾರ್ಕ್ ಎನ್ನುವ ಸಿನಿಮಾ ರೂಪಿಸಿ, ಜಗತ್ತಿಗೆ ಡೈನೋಸಾರ್ ಎಂಬ ದೈತ್ಯ ಜೀವಿಗಳ ಪರಿಚಯ ಮಾಡಿಸಿದ್ದು ಇದೇ ಹಾಲಿವುಡ್. ಟೈಟಾನಿಕ್ ನ ದುರಂತ ಅಂತ್ಯಕ್ಕೆ ದೃಶ್ಯ ವೈಭವ ನೀಡಿ ಎಂಥವರ ಕಣ್ಣಂಚಲ್ಲೂ ಹನಿ ನೀರು ಜಿನುಗುವಂತೆ ಮಾಡಿದ್ದು ಕೂಡ ಇದೇ ಹಾಲಿವುಡ್. ಈ ಸಾಲಿಗೆ ಹ್ಯಾರಿ ಪಾಟರ್ ಎನ್ನುವ ಅದ್ಭುತ ಕತೆಯನ್ನು ಸೇರಿಸದಿದ್ದರೆ ಹೇಗೆ? ಕಾದಂಬರಿ ರೂಪದ ಪಾಟರ್ ನನ್ನು ಜೀವಂತವಾಗಿಸಿದ್ದು ಕೂಡಾ ಹಾಲಿವುಡ್ ಹಿರಿಮೆ. ಹಾಗಂತಾ ಈ ಸಿನಿಮಾಗಳ ನಿರ್ಮಾಣ ಸುಮ್ಮನೆ ಆಗಿಲ್ಲ. ಇವುಗಳ ಯಶಸ್ಸಿನ ಹಿಂದೆ ನೂರಾರು ಕೋಟಿ ನೀರಿನಂತೆ ಹರಿದಿದೆ. ಆದರೆ, ಇವೆಲ್ಲವೂ ಬೃಹತ್ ಪರದೆ ಮೇಲೆ ಅರಳಿದ ಮಹಾಕೃತಿಗಳು. ಬಟ್ ಈಗ ಕಾಲ ಬದಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿ ಟಿವಿ ಸರಣಿಯೊಂದನ್ನು ಹಾಲಿವುಡ್ ಸಿನಿಮಾಗಳ ಬಜೆಟ್ಟನ್ನೇ ಮೀರಿಸಿ ನಿರ್ಮಾಣವಾಗ್ತಿದೆ ಅಂದ್ರೆ ನೀವು ನಂಬಲೇ ಬೇಕು.
ವಿಶ್ವದ ದಾಖಲೆ ಬಜೆಟ್ ನಲ್ಲಿ ಹ್ಯಾರಿ ಪಾಟರ್ ಸರಣಿ
ಇವತ್ತಿನ ಮಟ್ಟಿಗೆ ಹಾಲಿವುಡ್ ಸಿನಿಮಾಗೂ ಹಾಕದ ಬಂಡವಾಳವನ್ನೀಗ ಟಿವಿ ಸರಣಿಗೆ ಹೂಡಲಾಗುತ್ತಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಹೆಚ್ ಬಿಒ ಮ್ಯಾಕ್ಸ್ ತನ್ನ ಹ್ಯಾರಿ ಪಾಟರ್ ಟಿವಿ ಸರಣಿಯನ್ನು ನಿರ್ಮಿಸಲು ಮುಂದಾಗಿದೆ. ಆದ್ರೆ ಇದಕ್ಕಾಗಿ ಆ ನಿರ್ಮಾಣ ಸಂಸ್ಥೆ ವೆಚ್ಚ ಮಾಡ್ತಿರೋದೆಷ್ಟು ಗೊತ್ತಾ. ಆಶ್ಚರ್ಯವಾದ್ರೂ ಇದು ಸತ್ಯ, ಬರೋಬ್ಬರಿ 35 ಸಾವಿರ ಕೋಟಿ. 7 ಭಾಗಗಳಲ್ಲಿ ಸರಣಿ ಬಿಡುಗಡೆಯಾಗಲಿದ್ದು, ಪ್ರತಿ ಸರಣಿಯಲ್ಲೂ 6 ಅಧ್ಯಾಯಗಳಿರಲಿವೆ. ಹಾಗೆ ನೋಡಿದ್ರೆ ಪ್ರತಿ ಎಪಿಸೂಡ್ ಒಂದಕ್ಕೆ 856 ಕೋಟಿ ಖರ್ಚು ಮಾಡಲಾಗುತ್ತಿದೆ.
ಲಾರ್ಡ್ ಆಫ್ ರಿಂಗ್ಸ್ ದಾಖಲೆ ಉಡೀಸ್
ಸದ್ಯದ ದಾಖಲೆ ಮಟ್ಟಿಗೆ ಟಿವಿ ಸರಣಿಯಲ್ಲಿ ಲಾರ್ಡ್ ಅಪ್ ದಿ ರಿಂಗ್ಸ್-ದಿ ರಿಂಗ್ಸ್ ಆಪ್ ಪವರ್, ಸರಣಿ ಅತ್ಯಂತ ದುಬಾರಿಯದ್ದಾಗಿದೆ. ಇದರ ನಿರ್ಮಾಣಕ್ಕೆ ಅಂದು 1 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ, ಇದೀಗ ಹ್ಯಾರಿ ಪಾಟರ್ ಸರಣಿಯ ಸೆಟ್ ಗೇ ಲಾರ್ಡ್ ಆಫ್ ದಿ ರಿಂಗ್ಸ್ ಸರಣಿಯ ಒಟ್ಟು ಬಜೆಟ್ ಗಿಂತಾ ಹೆಚ್ಚು ಖರ್ಚು ಮಾಡಲಾಗ್ತಿದೆ. ನೂತನ ಸರಣಿಗಾಗಿ ಅದ್ಧೂರಿ ಸೆಟ್ ನಿರ್ಮಾಣ ಅಂತಿಮ ಹಂತ ತಲುಪಿದೆ. ಸರಣಿಯಲ್ಲಿ ಬರೋ ಪ್ರತಿ ಲೊಕೇಷನ್ ಗಳನ್ನೂ ಸೆಟ್ ನಲ್ಲೇ ನಿರ್ಮಿಸಲಾಗ್ತಿದೆ. ಹೀಗಾಗಿಯೇ ಸೆಟ್ ಗಾಗಿ 11 ಸಾವಿರ ಕೋಟಿ ಖರ್ಚು ಮಾಡಲಾಗ್ತಿದೆ. ಉಳಿದಂತೆ ಹ್ಯಾರಿ ಪಾಟರ್ ಸರಣಿಯಲ್ಲಿ ಅತಿರಥ ಕಲಾವಿದರ ದಂಡೇ ಇರಲಿದೆ. ಅಮೆರಿಕನ್ ನಟ ಜಾನ್ ಲಿತ್ ಗೋ, ಇಂಗ್ಲಿಷ್ ನಟಿ ಜಾನೆಟ್ ಎಂಸಿ ಟೀರ್, ಬ್ರಿಟಿಷ್ ನಟ ಪೌಲ್ ವೈಟ್ ಹೌಸ್, ಲ್ಯೂಕ್ ಥಲ್ಲೋನ್, ಪಾಪ ಎಸೈನ್ಡು ಮತ್ತು ನಿಕ್ ಫ್ರೋಸ್ಟ್ ನಟಿಸಲಿದ್ದಾರೆ. ಒಟ್ನಲ್ಲಿ ಜೆಕೆ ರೌಲಿಂಗ್ಸ್ ಬರೆದ ಈ ಮಹಾಕಾವ್ಯವನ್ನೀಗ ದೃಶ್ಯ ವೈಭವವನ್ನಾಗಿ ತೆರೆಗೆ ತರಲಾಗ್ತಿದ್ದು, ಮುಂದಿನ ವರ್ಷ ನಿಮ್ಮ ಮನೆ ಟಿವಿಯಲ್ಲೇ ಈ ಅತ್ಯಮೋಘ ವೈಭೋಗವನ್ನು ಕಣ್ತುಂಬಿಕೊಳ್ಳಬಹುದಾಗಿದೆ.