ಚಂಡೀಗಢ: ಪಂಜಾಬ್ ನಲ್ಲಿರುವ ಆಮ್ ಆದ್ಮಿ ಪಕ್ಷದ ಸರ್ಕಾರವು ಭಾರಿ ವಿವಾದಕ್ಕೆ ಸಿಲುಕಿದೆ. ಅಸ್ತಿತ್ವದಲ್ಲೇ ಇಲ್ಲದ ಆಡಳಿತ ಸುಧಾರಣೆಗಳ ಇಲಾಖೆಗೆ ಆಪ್ ಶಾಸಕ ಕುಲದೀಪ್ ಸಿಂಗ್ ಧಲಿವಾಲ್ (Kuldeep Singh Dhaliwal) ಅವರು ಸಚವರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರೆ ನಂಬಲೇಬೇಕು. ಆಡಳಿತ ಸುಧಾರಣೆಗಳ ಇಲಾಖೆಯು ಕೇವಲ ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಒಂದು ಕಚೇರಿ ಇಲ್ಲ, ಸಿಬ್ಬಂದಿ ಇಲ್ಲ, ಆಡಳಿತ ನಡೆಸಲು ರೂಪುರೇಷೆಗಳೇ ಇಲ್ಲ. ಆದರೂ ಇದಕ್ಕೊಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರು 21 ತಿಂಗಳಿಂದ ಕಾರ್ಯನಿರ್ವಹಿಸಿದ್ದಾರೆ ಎಂಬುದೇ ಅಚ್ಚರಿ ಹಾಗೂ ದುರಂತ.
ಇಲಾಖೆಗೆ ಸಂಬಂಧಿಸಿದಂತೆ ಕುಲದೀಪ್ ಸಿಂಗ್ ಧಲಿವಾಲ್ ಅವರೇ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ. ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಯಾವುದೇ ಸಭೆಗಳು ನಡೆದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿಯೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ಕುಲದೀಪ್ ಸಿಂಗ್ ಧಲಿವಾಲ್ ಅವರಿಗೆ ಅನಿವಾಸಿ ಭಾರತೀಯ (ಎನ್ ಆರ್ ಐ ) ವ್ಯವಹಾರಗಳ ಇಲಾಖೆ ನೀಡಿ ಸಮಾಧಾನಪಡಿಸಲಾಗಿದೆ.
ಫೆಬ್ರವರಿ 22ರಂದು ಆಮ್ ಆದ್ಮಿ ಪಕ್ಷದ ಸರ್ಕಾರವು ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರಿಗೆ ಹಂಚಿಕೆಯಾಗಿದ್ದ ಆಡಳಿತ ಸುಧಾರಣಾ ಇಲಾಖೆಯೇ ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಮಾತ್ರ ಇಂತಹ ಇಂತಹ ದುರಾಡಳಿತ ಇರಲು ಸಾಧ್ಯ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ವಿವಾದದ ಬಳಿಕ ಸ್ಪಷ್ಟನೆ ನೀಡಿರುವ ಕುಲದೀಪ್ ಸಿಂಗ್ ಧಲಿವಾಲ್, “ಇದರ ಕುರಿತು ನನಗಿಂತ ಭಗವಂತ್ ಮಾನ್ ಅವರೇ ಚೆನ್ನಾಗಿ ಮಾಹಿತಿ ನೀಡಲಿದ್ದಾರೆ. ನಾನೇನಿದ್ದರೂ ಪಕ್ಷದ ಸೈನಿಕ. ಪಕ್ಷ ವಹಿಸಿದ ಕೆಲಸವನ್ನು ಮಾಡುವುದಷ್ಟೇ ನನ್ನ ಗುರಿ” ಎಂದಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ಸಚಿವಾಲಯವನ್ನು ನಿಭಾಯಿಸಿದವರಿಗೆ, ಪಕ್ಷ ವಹಿಸಿದ ಕೆಲಸ ನಿಭಾಯಿಸುವುದು ದೊಡ್ಡದೇನಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಕಿಚಾಯಿಸಿದ್ದಾರೆ.