ಮಂಡ್ಯ: ಒಂದು ಸಮುದಾಯದ ಒಲೈಕೆಯಿಂದಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಮುಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ನಿಜವಾದ ಗಲಭೆಕೋರರು ಬೇರೆಯೇ ಇದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಿ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರೇ ಬೆಂಕಿ ಹಚ್ಚಿಸಿ ಗಲಭೆ ಮಾಡಿಸಿದ್ದರು. ಈಗ ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ. ಹಲವರು ಈಗಾಗಲೇ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಈ ಘಟನೆ ನಡೆಸಿದೆ ಎಂದು ಆರೋಪಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶ ಕೂರಿಸಿದವರನ್ನೇ ಎ1 ಮಾಡಿದ್ದಾರೆ. ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿಸಿದ್ದಾರೆ. ಆದರೆ, ಅಮಾಯಕರನ್ನು ಬಂಧಿಸಿರುವುದು ತಪ್ಪು. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಸ್ಪಾನ್ಸರ್ ‘ಕೈ’ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಗೃಹ ಸಚಿವ ಅನ್ನೋಕೆ ಆಗುತ್ತಾ? ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಈ ಘಟನೆಯಿಂದ ಅಮಾಯಕ ಜನರ ಬದುಕು ಬೀದಿಗೆ ಬಂದಿದೆ. 19 ವರ್ಷದ ಸಣ್ಣ ವ್ಯಕ್ತಿಯ ಜೀವನ ಬೀದಿಗೆ ಬಂದಿದೆ. ಪೊಲೀಸರನ್ನು ಕೊಲೆ ಮಾಡಲು ಬಂದಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೂ ಭದ್ರತೆ ನೀಡದ ದರಿದ್ರ ಸರ್ಕಾರ ಇದಾ? ಈ ಎಫ್ ಐಆರ್ ನೋಡಿದರೆ, ಇವರನ್ನು ಗೃಹ ಸಚಿವರು ಅನ್ನಬೇಕಾ? ಇಷ್ಟೆಲ್ಲ ಘಟನೆ ನಡೆದರೂ ಇದು ಆಕಸ್ಮಿಕ ಎಂದು ಹೇಳಿದ್ದಾರೆ. ಅವರಿಗೆ ಏನನ್ನಬೇಕು? ಎಂದು ಗುಡುಗಿದ್ದಾರೆ.
ತಲ್ವಾರ್ ಹಿಡಿದು ಓಡಾಡುತ್ತಾರೆ ಅಂದ್ರೆ ಎಷ್ಟು ಧೈರ್ಯ ಇರಬೇಕು. ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಹೇಗೆ? ಮಸೀದಿ ಬಳಿ 10 ನಿಮಿಷ ಡ್ಯಾನ್ಸ್ ಮಾಡಲು ಬಿಟ್ಟವರು ಯಾರು? ಆಗ ಪೊಲೀಸರು ಏನು ಮಾಡುತ್ತಿದ್ದರು? ಹೆಚ್ಚುವರಿ ಪೊಲೀಸರಿದ್ದರೆ ಪರಿಸ್ಥಿತಿ ನಿಯಂತ್ರಣ ಮಾಡಬಹುದಿತ್ತು ಎದು ವಾಗ್ದಾಳಿ ನಡೆಸಿದ್ದಾರೆ.