ನವದೆಹಲಿ: ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿಸಿದ್ದಾರೆ.
ಈಶ್ವರನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಿದರು. ನರೇಂದ್ರ ಮೋದಿ ನಂತರ ಹಿಂದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಮಿತ್ ಶಾ ಪ್ರತಿಜ್ಞಾ ವಿಧಿ ಬೋಧಿಸಿದರು.
ನರೇಂದ್ರ ಮೋದಿ ಅವರ 2.0 ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾಗಿದ್ದ ನಿತಿನ್ ಗಡ್ಕರಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಮೋದಿ ಸರ್ಕಾರಕ್ಕೆ ಮರಳಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಸಭೆ ಸಂಸದೆ ನಿರ್ಮಲಾ ಸೀತಾರಾಮನ್ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ರಾಜ್ಯಸಭೆ ಸಂಸದ ಸುಬ್ರಮಣ್ಯಂ ಜೈಶಂಕರ್ ಮರಳಿ ಸಂಪುಟ ಸೇರಿದರು. ಹರಿಯಾಣ ಮಾಜಿ ಸಿಎಂ ಮನೋಹರ ಲಾಲ್ ಖಟ್ಟರ್ ಅವರು ಕ್ಯಾಬಿನೆಟ್ ಸಚಿವರಾಗಿ ಮೋದಿ ಸರ್ಕಾರಕ್ಕೆ ಸೇರ್ಪಡೆಯಾದರು. ಎಚ್‌ಡಿ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕುಮಾರಸ್ವಾಮಿ ಹೆಸರು ಕೂಗುತ್ತಿದ್ದಂತೆ ಜೋರಾದ ಘೋಷಣೆಗಳು ಕೇಳಿ ಬಂದಿದ್ದು ವಿಶೇಷವಾಗಿತ್ತು.
ನಂತರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರಾಗಿದ್ದ ಪಿಯೂಷ್ ಗೋಯಲ್, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್, ಬಿಹಾರದ ಮಾಜಿ ಸಿಎಂ, ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ, ಬಿಹಾರದ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಜೆಡಿಯು ಕೋಟಾದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸರ್ಬಾನಂದ್ ಸೊನೊವಾಲ್, ಡಾ. ವಿರೇಂದ್ರ ಕುಮಾರ್ ಖಾಟಿಕ್, ಟಿಡಿಪಿಯ ಕಿಂಜರಪು ರಾಮ್ ಮೋಹನ್ ನಾಯ್ಡು, ಪ್ರಲ್ಹಾದ್ ಜೋಶಿ ಪ್ರಮಾಣ ವಚನ ಸ್ವೀಕರಿಸಿ ಮೋದಿ ಕ್ಯಾಬಿನೆಟ್ ಸೇರಿದ್ದಾರೆ.