ಮಡಿಕೇರಿ: ಇದೇ ಮೊದಲ ಬಾರಿಗೆ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಇಲ್ಲಿಯವರೆಗೆ ಹೃದಯ, ಕಣ್ಣು, ಕಿಡ್ನಿ, ಚರ್ಮ, ಲಿವರ್ ನಂತಹ ಮನುಷ್ಯನ ಅಂಗಾಂಗಳನ್ನು ದಾನ ಮಾಡುತ್ತಿದ್ದರು. ಆದರೆ, ಈ ಯುವಕ ಮೂಳೆಗಳನ್ನೇ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದ 33 ವರ್ಷದ ಯುವಕ ಈಶ್ವರ್ ಅಪಘಾತದಲ್ಲಿ ಗಾಯಗೊಂಡು, ಬ್ರೈನ್ ಡೆಡ್ ಆಗಿತ್ತು.
ಆದರೆ, ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬಸ್ಥರು ಮೂಳೆಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ಮೂಲಕ ಕ್ಯಾನ್ಸರ್‌ಪೀಡಿತ 6 ಮಕ್ಕಳ ಕಾಲುಗಳಿಗೆ ಬಲ ಬಂದಂತಾಗಿದೆ.
ಈಶ್ವರ್ ತನ್ನ ತಂದೆ- ತಾಯಿಗೆ ಒಬ್ಬನೇ ಒಬ್ಬ ಮಗ. ಇಬ್ಬರು ಅಕ್ಕಂದಿರು ವಿವಾಹವಾಗಿದ್ದರು. ಪಿಕ್ ಅಪ್ ಜೀಪ್ ಓಡಿಸಿ ಜೀವನ ಸಾಗಿಸುತ್ತಿದ್ದ. ಆದರೆ, ಡಿ. 21ರಂದು ಪಿಕ್ ಅಪ್ ಜೀಪ್ ಓಡಿಸಿ ಸಂಜೆ ಮನೆಗೆ ಮರಳುವ ಹಾದಿಯಲ್ಲಿ ಜೀಪ್ನ ಟೈರ್ ಸ್ಪೋಟಗೊಂಡು ಪಲ್ಟಿಯಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಹಲೋಕ ತ್ಯಜಿಸಿದ ಮಗನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.
ಹೃದಯ ಕಿಡ್ನಿಯಂತಹ ಅಂಗಾಂಗಳು ಆ ಸಂದರ್ಭದಲ್ಲಿ ದಾನ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ವೈದ್ಯರ ಸಲಹೆಯಂತೆ ಅಪರೂಪದಲ್ಲಿ ಅಪರೂಪ ಎಂಬಂತೆ, ಈಶ್ವರ್ನ ಎರಡು ಕೈ ಹಾಗೂ ಕಾಲುಗಳ ಮೂಳೆಗಳನ್ನು ದಾನ ಮಾಡಲಾಗಿದೆ.