ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವಿನ ಮುನಿಸು ಮತ್ತೊಮ್ಮೆ ಬಯಲಾಗಿದ್ದು, ಶಶಿ ತರೂರ್ ಅವರು ತುರ್ತು ಪರಿಸ್ಥಿತಿ ಕುರಿತು ಲೇಖನವೊಂದು ಬರೆದಿದ್ದು, ಅದರಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಇದು 1975ರ ಭಾರತವಲ್ಲ” ಎಂದು ಹೇಳುವ ಮೂಲಕ ತುರ್ತು ಪರಿಸ್ಥಿತಿ ಹೇರಲ್ಪಟ್ಟ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗೂ ಇಂದಿನ ಭಾರತಕ್ಕೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳಿದ್ದಾರೆ. ಆ ಅವಧಿಯಲ್ಲಿ ಪೊಲೀಸರ ವಶದಲ್ಲಿ ನಡೆದ ಹಿಂಸೆ ಮತ್ತು ಹತ್ಯೆಗಳು ಸೇರಿದಂತೆ ಭೀಕರ ವಾಸ್ತವಗಳ ಬಗ್ಗೆ ಜಗತ್ತು ಅರಿತಿರಲಿಲ್ಲ ಎಂದು ತರೂರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ತುರ್ತು ಪರಿಸ್ಥಿತಿಯ ಕರಾಳ ದಿನಗಳು:
“ಪ್ರಾಜೆಕ್ಟ್ ಸಿಂಡಿಕೇಟ್”ನಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ತರೂರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಿರಂಕುಶ ಧೋರಣೆಯು ಸಾರ್ವಜನಿಕ ಜೀವನವನ್ನು ಭಯ ಮತ್ತು ದಮನದ ಸ್ಥಿತಿಗೆ ತಳ್ಳಿತು ಎಂದು ಬಣ್ಣಿಸಿದ್ದಾರೆ. ಸ್ವಾತಂತ್ರ್ಯವನ್ನು ಹೇಗೆ ನಿಧಾನವಾಗಿ ಕಸಿದುಕೊಳ್ಳಲಾಗುತ್ತದೆ ಎಂಬುದಕ್ಕೆ ತುರ್ತು ಪರಿಸ್ಥಿತಿ ಒಂದು ಉದಾಹರಣೆಯಾಗಿದೆ ಎಂದಿದ್ದಾರೆ.
ಸುಮಾರು ಎರಡು ವರ್ಷಗಳ ಕಾಲ, ಅಂದರೆ ಜೂನ್ 1975 ರಿಂದ ಮಾರ್ಚ್ 1977 ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ, ನಾಗರಿಕ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು ಮತ್ತು ವಿರೋಧ ಪಕ್ಷದ ನಾಯಕರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲಾಯಿತು. ಈ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳ ಭೀಕರ ಪಟ್ಟಿಯನ್ನೇ ನೀಡಬಹುದು ಎಂದು ತರೂರ್ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳನ್ನು ಹೇಗೆ ಮೌನವಾಗಿಸಲಾಯಿತು, ಹಿಂಸೆ ಮತ್ತು ಹತ್ಯೆಗಳು ಹೇಗೆ ವ್ಯಾಪಕವಾದವು ಎಂಬುದನ್ನು ತರೂರ್ ಎತ್ತಿ ತೋರಿಸಿದ್ದಾರೆ. ಈ ಕರಾಳ ವಾಸ್ತವಗಳು ಆಡಳಿತವನ್ನು ವಿರೋಧಿಸಲು ಧೈರ್ಯ ಮಾಡಿದವರ ಪಾಲಿಗೆ ಭೀಕರವಾಗಿದ್ದವು ಎಂದು ಅವರು ತಿಳಿಸಿದ್ದಾರೆ. ಇಡೀ ನ್ಯಾಯಾಂಗ ವ್ಯವಸ್ಥೆಯು ಭಾರೀ ಒತ್ತಡಕ್ಕೆ ಮಣಿಯಿತು, ಸುಪ್ರೀಂ ಕೋರ್ಟ್ ಕೂಡ ಹೇಬಿಯಸ್ ಕಾರ್ಪಸ್ ಮತ್ತು ನಾಗರಿಕರ ಸ್ವಾತಂತ್ರ್ಯದ ಹಕ್ಕನ್ನು ಅಮಾನತುಗೊಳಿಸುವುದನ್ನು ಎತ್ತಿಹಿಡಿಯಿತು ಎಂದು ತರೂರ್ ಉಲ್ಲೇಖಿಸಿದ್ದಾರೆ.
“ಪತ್ರಕರ್ತರು, ಹೋರಾಟಗಾರರು ಮತ್ತು ವಿರೋಧ ಪಕ್ಷದ ನಾಯಕರು ಜೈಲು ಪಾಲಾದರು. ವ್ಯಾಪಕ ಸಾಂವಿಧಾನಿಕ ಅತಿಕ್ರಮಣಗಳು ಮಾನವ ಹಕ್ಕುಗಳ ಉಲ್ಲಂಘನೆಗಳ ಭೀಕರ ಪಟ್ಟಿಗೆ ಕಾರಣವಾಯಿತು” ಎಂದು ತರೂರ್ ಬರೆದಿದ್ದಾರೆ.
ಸಂಜಯ್ ಗಾಂಧಿ ಬಗ್ಗೆ ತೀಕ್ಷ್ಣ ಟೀಕೆ:
ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿಯವರನ್ನು ತರೂರ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅವರ ಕಾರ್ಯಗಳನ್ನು “ಮಾತಿಗೆ ನಿಲುಕದ ಕ್ರೌರ್ಯ” ಎಂದು ಬಣ್ಣಿಸಿದ್ದಾರೆ. “ಶಿಸ್ತು ಮತ್ತು ಸುವ್ಯವಸ್ಥೆಯ ಅನ್ವೇಷಣೆಯು ಮಾತಿಗೇ ನಿಲುಕದ ಕ್ರೂರತೆಗೆ ತಿರುಗಿತು, ವಿಶೇಷವಾಗಿ ಇಂದಿರಾಗಾಂಧಿ ಪುತ್ರ ಸಂಜಯ್ ನೇತೃತ್ವದಲ್ಲಿ ನಡೆದ ಬಲವಂತದ ಸಂತಾನಶಕ್ತಿಹರಣ ಶಿಬಿರಗಳಲ್ಲಿ ಇದು ಸ್ಪಷ್ಟವಾಯಿತು. ಬಡ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರಂಕುಶ ಗುರಿಗಳನ್ನು ತಲುಪಲು ಬಲವಂತ ಮತ್ತು ಹಿಂಸೆಯನ್ನು ಬಳಸಲಾಯಿತು” ಎಂದು ತರೂರ್ ಒತ್ತಿ ಹೇಳಿದ್ದಾರೆ.
“ಭಿನ್ನಾಭಿಪ್ರಾಯವನ್ನು ಮೌನಗೊಳಿಸುವುದು, ಮುಕ್ತವಾಗಿ ಸಭೆ ಸೇರುವ, ಬರೆಯುವ ಮತ್ತು ಮಾತನಾಡುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ಮತ್ತು ಸಾಂವಿಧಾನಿಕ ನಿಯಮಗಳಿಗೆ ಸ್ಪಷ್ಟವಾದ ತಿರಸ್ಕಾರ ಭಾರತದ ರಾಜಕೀಯದ ಮೇಲೆ ಅಳಿಸಲಾಗದ ಕಳಂಕವನ್ನು ಬಿಟ್ಟುಹೋಗಿದೆ” ಎಂದು ಅವರು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಕಲಿಸಿದ ಪಾಠಗಳು:
ತುರ್ತು ಪರಿಸ್ಥಿತಿಯಿಂದ ಕಲಿತ ಪಾಠಗಳನ್ನು ತರೂರ್ ಪಟ್ಟಿ ಮಾಡಿದ್ದು, ಆಡಳಿತಾರೂಢ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧವೂ ಸೂಕ್ಷ್ಮವಾದ ಟೀಕೆಗಳನ್ನು ಮಾಡಿದ್ದಾರೆ.
“ಮೊದಲನೆಯದಾಗಿ, ಮಾಹಿತಿ ಸ್ವಾತಂತ್ರ್ಯ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮ ಅತ್ಯಂತ ಮಹತ್ವದ್ದು… ಎರಡನೆಯದಾಗಿ, ಪ್ರಜಾಪ್ರಭುತ್ವಗಳು ಸ್ವತಂತ್ರ ನ್ಯಾಯಾಂಗದ ಮೇಲೆ ಅವಲಂಬಿತವಾಗಿವೆ, ಅದು ಕಾರ್ಯಕಾರಿ ಮಂಡಳಿಯ ಅತಿಯಾದ ಹಸ್ತಕ್ಷೇಪದ ವಿರುದ್ಧ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿರಬೇಕು” ಎಂದು ಅವರು ಹೇಳಿದ್ದಾರೆ. “ಮೂರನೆಯ ಪಾಠವು ನಮ್ಮ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಅತ್ಯಂತ ಪ್ರಸ್ತುತವಾದುದು. ಶಾಸನಸಭೆಯ ಬಹುಮತಕ್ಕೆ ವಿಪರೀತವೆನ್ನುವಂತೆ ಬೆಂಬಲವಾಗಿ ನಿಲ್ಲುವ ಕಾರ್ಯಾಂಗವು, ಯಾವತ್ತೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂದೂ ಅವರು ಬರೆದಿದ್ದಾರೆ.



















