ಐಪಿಎಲ್ ಸೀಸನ್-18 ರ ಮೆಗಾ ಹರಾಜಿಗಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬೆನ್ನಲ್ಲಿಯೇ ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಫ್ರಾಂಚೈಸಿಗಳು ಮನವಿ ಮಾಡುತ್ತಿವೆ.
ಬಹುತೇಕ ಫ್ರಾಂಚೈಸಿಗಳು ಮೂರು ಮಾರ್ಪಾಡುಗಳನ್ನು ಮಾಡುವಂತೆ ಆಗ್ರಹಿಸಿವೆ. ಐಪಿಎಲ್ ಮೆಗಾ ಹರಾಜನ್ನು ಐದು ವರ್ಷಗಳಿಗೆ ಒಮ್ಮೆ ನಡೆಸುವಂತೆ ಬಹುತೇಕ ಫ್ರಾಂಚೈಸಿಗಳು ಮನವಿ ಮಾಡಿವೆ. ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಈ ನಿಯಮವನ್ನು ಬದಲಿಸಿ 5 ವರ್ಷಗಳಿಗೆ ಮೆಗಾ ಹರಾಜು ನಡೆಸಲು ಆಗ್ರಹಿಸಿದ್ದಾರೆ.
ಎರಡನೇ ಬೇಡಿಕೆ ಏನೆಂದರೆ, ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿವೆ. ಹಿಂದಿನ ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈ ಬಾರಿ ಅದನ್ನು 4 ರಿಂದ 6 ಕ್ಕೆ ಏರಿಸಲು ಕೆಲ ಫ್ರಾಂಚೈಸಿಗಳು ಮವಿ ಮಾಡಿವೆ.
ಮೂರನೇ ಬೇಡಿಕೆಯಲ್ಲಿ ಮೆಗಾ ಹರಾಜಿಗೂ ಮುನ್ನ 8 ಆಟಗಾರರ ಮೇಲೆ ಆರ್ಟಿಎಂ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಆಗ್ರಹಿಸಿವೆ. ಆರ್ಟಿಎಂ ಎಂದರೆ ರೈಟ್ ಟು ಮ್ಯಾಚ್ ಆಯ್ಕೆ. ಅಂದರೆ ತಮಗೆ ಬೇಕಾದ ಆಟಗಾರರನ್ನು ಆರ್ಟಿಎಂ ಆಯ್ಕೆ ಬಳಸಿ ಹರಾಜಿಗೆ ಬಿಡುಗಡೆ ಮಾಡುವುದು. ಹೀಗೆ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರನ್ನು ಇತರೆ ತಂಡ ಖರೀದಿಸಿದರೂ, ಆ ಮೊತ್ತವನ್ನು ತಾವೇ ಪಾವತಿಸುತ್ತೇವೆ ಎಂದು ಹೇಳಿ ಬಿಡುಗಡೆ ಮಾಡಿದ ತಂಡವೇ ಮತ್ತೆ ಖರೀದಿಸಬಹುದು.
ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಂಡ ನಂತರ ಆಟಗಾರನ ಮೇಲಿನ ಹಕ್ಕು ಈ ಹಿಂದಿನ ಫ್ರಾಂಚೈಸಿ ಹತ್ತಿರವೇ ಇರುತ್ತದೆ. ಬೇಕಾದರೆ ಆಟಗಾರನನ್ನು ಆ ಫ್ರಾಂಚೈಸಿ ಇಟ್ಟುಕೊಳ್ಳಬಹುದು ಇಲ್ಲವಾದರೆ, ಬಿಟ್ಟುಕೊಡಬಹುದು. ಆದರೆ, ಈ ಮೂರು ಬೇಡಿಕೆಗಳನ್ನು ಬಿಸಿಸಿಐ ಮಾನ್ಯ ಮಾಡಲಿದೆಯೇ ಎಂಬುವುದನ್ನು ಕಾಯ್ದು ನೋಡಬೇಕಿದೆ.