ಬೆಂಗಳೂರು: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಐಪಿಎಲ್ ಅಧ್ಯಕ್ಷರು ಮತ್ತು ಬಿಸಿಸಿಐಗೆ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ನಿಷೇಧಿಸುವಂತೆ ಕೋರಿಕೆ ಸಲ್ಲಿಸಿದೆ. ಇದರಲ್ಲಿ ಸಿಗರೇಟ್ ಜಾಹೀರಾತುಗಳೂ ಸೇರಿವೆ. 2025ರ ಐಪಿಎಲ್ ಸೀಸನ್‌ನಲ್ಲಿ ಈ ನಿಷೇಧವನ್ನು ಜಾರಿಗೆ ತರಬೇಕೆಂದು ಸಚಿವಾಲಯವು ಹೇಳಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ , ಆರೋಗ್ಯ ಸೇವೆಗಳ ನಿರ್ದೇಶಕ ಅತುಲ್ ಗೋಯಲ್ ಪತ್ರ ಬರೆದಿದ್ದು, ತಂಬಾಕು ಮತ್ತು ಮದ್ಯದ ಉತ್ಪನ್ನಗಳನ್ನು ಐಪಿಎಲ್ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳು ಮತ್ತು ಕ್ರೀಡಾ ಸೌಲಭ್ಯಗಳಲ್ಲಿ ನಿಷೇಧಿಸುವಂತೆ ಹೇಳಿದ್ದಾರೆ.
ಗೋಯಲ್ ಅವರು, ಭಾರತವು ನಾನ್-ಕಮ್ಯುನಿಕೇಬಲ್ ರೋಗಗಳ (NCDs) ಹೆಚ್ಚಿನ ಹೊರೆಯನ್ನು ಎದುರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ತಂಬಾಖು ಮತ್ತು ಮದ್ಯದ ಬಳಕೆ ಪ್ರಮುಖ ಕಾರಣಗಳಾಗಿವೆ. ಈ ರೋಗಗಳು ವಾರ್ಷಿಕವಾಗಿ 70% ರಷ್ಟು ಮರಣಗಳಿಗೆ ಕಾರಣವಾಗಿವೆ. ಆದ್ದರಿಂದ, ಐಪಿಎಲ್ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೋರಿದ್ದಾರೆ.
ಭಾರತವು ತಂಬಾಕು ಅನಾರೋಗ್ಯಕ್ಕೆ ಸಂಬಂಧಿತ ಮರಣಗಳಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸುಮಾರು 14 ಲಕ್ಷ ಜನರು ತಂಬಾಕು ಸೇವನೆಯಿಂದಾಗಿ ಮೃತಪಡುತ್ತಾರೆ. ಮದ್ಯವು ಭಾರತೀಯರು ಬಳಸುವ ಅತ್ಯಂತ ಸಾಮಾನ್ಯ ಸೈಕೋಆಕ್ಟಿವ್ ಪದಾರ್ಥವಾಗಿದೆ. 2025ರ ಐಪಿಎಲ್ ಸೀಸನ್ ಮಾರ್ಚ್ 22ರಂದು ಪ್ರಾರಂಭವಾಗಲಿದೆ. ಐಪಿಎಲ್ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಕಾರ್ಯಕ್ರಮವಾಗಿದೆ. ಕ್ರೀಡೆಗಳಿಗೆ ಸಂಬಂಧಿಸಿದ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ತಂಬಾಕು ಅಥವಾ ಮದ್ಯದ ಜಾಹೀರಾತುಗಳು ನೇರ ಅಥವಾ ಪರೋಕ್ಷವಾಗಿ ಸಾರ್ವಜನಿಕರಿಗೆ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ವಿರುದ್ಧವಾದ ಸಂದೇಶ ನೀಡುತ್ತವೆ. ಆದ್ದರಿಂದ, ಐಪಿಎಲ್ ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಏನೆಲ್ಲ ನಿಯಮಗಳು?
ಸ್ಟೇಡಿಯಂ ಪ್ರಾಂಗಣದಲ್ಲಿ ಮತ್ತು ಟೆಲಿಕಾಸ್ಟ್ ಸಮಯದಲ್ಲಿ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ನಿಷೇಧಿಸಬೇಕು. ಐಪಿಎಲ್ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳಲ್ಲಿ ತಂಬಾಖು ಮತ್ತು ಮದ್ಯದ ಉತ್ಪನ್ನಗಳ ಮಾರಾಟ ನಿಷೇಧಿಸಬೇಕು. ಕ್ರಿಕೆಟ್ ಆಟಗಾರರು ಮತ್ತು ಕಮೆಂಟೇಟರ್ಗಳು ತಂಬಾಕು ಅಥವಾ ಮದ್ಯದ ಉತ್ಪನ್ನಗಳಿಗೆ ಪ್ರಾಯೋಜಕತ್ವ ನೀಡುವುದನ್ನು ತಡೆಯಬೇಕು.
ಕ್ರಿಕೆಟ್ ಆಟಗಾರರು ಯುವಕರಿಗೆ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಮಾದರಿಯಾಗಿದ್ದಾರೆ. ಐಪಿಎಲ್ ದೇಶದ ಅತ್ಯಂತ ದೊಡ್ಡ ಕ್ರೀಡಾ ವೇದಿಕೆಯಾಗಿ, ಸಾರ್ವಜನಿಕ ಆರೋಗ್ಯವನ್ನು ಪ್ರೋತ್ಸಾಹಿಸಲು ಮತ್ತು ಸರ್ಕಾರದ ಆರೋಗ್ಯ ಉಪಕ್ರಮಗಳನ್ನು ಬೆಂಬಲಿಸಲು ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಹೊಂದಿದೆ. ಈ ಕ್ರಮಗಳು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಯುವ ಪೀಳಿಗೆಯನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.