ಮಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ತಿರುಪತಿ ಮಾದರಿಯಲ್ಲಿ ದರ್ಶನ ಸರತಿ ವ್ಯವಸ್ಥೆಗೆ ಚಿಂತನೆ ನಡೆದಿದೆ.
ಈ ನಿಟ್ಟಿನಲ್ಲಿ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಭಕ್ತರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನೂತನ ಕ್ಯೂ ಕಾಂಪ್ಲೆಕ್ಸ್ ಗೆ ಜ. 7ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದಕ್ಕಾಗಿ 2,75,177 ಚದರ ಅಡಿಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಒಟ್ಟು 16 ಹಾಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ಬಂದು ಈ ಹಾಲ್ ಗಳಲ್ಲಿ ವಿಶ್ರಾಂತಿ ಪಡೆಯಬಹುದು ಎನ್ನಲಾಗಿದೆ.
ಒಂದು ಹಾಲ್ ನಲ್ಲಿ 600 ರಿಂದ 800 ಜನ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಹಾಲ್ ನಲ್ಲಿ ಸುಸಜ್ಜಿತ ಶೌಚಾಲಯ, ಮಗುವಿನ ಆರೈಕೆ ಕೇಂದ್ರ ಕೊಠಡಿಗಳು ಇರುತ್ತವೆ. ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಸೂಚನಾ ಫಲಕದ ಜತೆಗೆ ಟಿವಿಯಲ್ಲಿಯೂ ಮಾಹಿತಿ ನೀಡಲಾಗುತ್ತದೆ. ಸಿಸಿ ಟಿವಿ ಅಳವಡಿಸಲಾಗಿದ್ದು, ಕಾಂಪ್ಲೆಕ್ಸ್‌ನ ಪ್ರವೇಶ ದ್ವಾರದ ಎದುರು ಕ್ಷೇತ್ರದ ಇತಿಹಾಸ, ಪರಂಪರೆ ಸಾರುವ, ಜಾತ್ರೆ ಮಹೋತ್ಸವ ದೇವರಬಲಿ, ಉತ್ಸವಗಳ ಕುರಿತು ಸೇರಿದಂತೆ ಇನ್ನಿತರ ಮಾಹಿತಿ ಹಾಕಲಾಗಿರುತ್ತದೆ.