ಉಡುಪಿ: ತಿಮ್ಮಪ್ಪನ ಲಡ್ಡುದಲ್ಲಿ ಪ್ರಾಣಿಗಳ ಕೊಬ್ಬು ಇರುವುದು ದೃಢವಾಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಕಂಡು ಬಂದಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಮಧ್ಯೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀ ಮಾತನಾಡಿದ್ದಾರೆ. ತಿರುಪತಿಯ ಶ್ರೀನಿವಾಸ ಗೋರಕ್ಷಣೆಗೆ ಅವತರಿಸಿದವನು. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದಾರೆ ಎಂದು ಗುಡುಗಿದ್ದಾರೆ.
ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದಾರೆ. ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಮಿಶ್ರಣದಿಂದ ಲಡ್ಡು ಪ್ರಸಾದ ತಯಾರಿಸಿದ್ದಾರೆ. ಇದು ಸನಾತನ ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ. ಆಂಧ್ರದ ಹಿಂದಿನ ಸರ್ಕಾರ ಈ ಕೃತ್ಯ ನಡೆಸಿರುವುದು ಖಂಡನಾರ್ಹ. ಇದು ದೇವರಿಗೆ ಬಗೆದಿರುವ ಅಪಚಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನ ದೇವಾಲಯಕ್ಕೆ ಬಳಸಿದ್ದೀರಿ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿ ಇರಬಾರದು. ಬದಲಿಗೆ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ತಿರುಪತಿ ದೇವಾಲಯದ ಆಡಳಿತವನ್ನು ಹಿಂದೂಗಳ ಸಂಸ್ಥೆಗೆ ನೀಡಿ ಎಂದು ಮನವಿ ಮಾಡಿದ್ದಾರೆ.