ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್ಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ತಾಮ್ರದ ಹೊದಿಕೆಯನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಬೈಲೂರಿನ ಪರಶುರಾಮ ಥೀಮ್ ಪಾರ್ಕ್ನ ಮುಖ್ಯ ದ್ವಾರವನ್ನು ಆಯುಧದಿಂದ ಮೀಟಿ ಬಾಗಿಲನ್ನು ಒಡೆದು, ಒಳನುಗ್ಗಿದ ಕಳ್ಳರು, ಇಲ್ಲಿನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳ್ಳತನ ಮಾಡಿದ್ದಾರೆಂದು ದೂರಲಾಗಿದೆ.
ಜ.3ರಂದು ಸಂಜೆ ವೇಳೆ ಪಾರ್ಕ್ನ ಮಾಜಿ ಕಾವಾಲುಗಾರ ಬೈಲೂರಿನ ಸಂತೋಷ್, ಈ ವಿಷಯವನ್ನು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಶಾಸಕ ಸುನೀಲ್ ಕುಮಾರ್ ಅವರು, “ಕ್ಷೇತ್ರದ ಮಹತ್ವಾಕಾಂಕ್ಷಿ ಪ್ರವಾಸಿ ಯೋಜನೆಯನ್ನು ಕಾಂಗ್ರೆಸ್ ಮುಖಂಡರ ರಾಜಕೀಯ ಪ್ರೇರಿತ ಸಂಚು ಪಾಳುಬೀಳುವಂತೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಅನುದಾನ ತಡೆಹಿಡಿದು ಅಭಿವೃದ್ಧಿಗೆ ಅಡ್ಡಿಪಡಿಸಲಾಗಿದೆ. ಜಿಲ್ಲಾಡಳಿತದ ವೈಫಲ್ಯದಿಂದಾಗಿ ಇಂದು ಕಳ್ಳರು ನುಗ್ಗಿ ಧ್ವಂಸ ಮಾಡುವಂತಾಗಿದೆ” ಎಂದು ಕಿಡಿಕಾರಿದ್ದಾರೆ.
ಜಿಲ್ಲಾಡಳಿತ ಪ್ರವೇಶ ನಿಷಿದ್ದ ಆದೇಶವಿದ್ದರೂ ಈ ಹಿಂದೆ ಕೆಲವರು ಕಾನೂನು ಬಾಹಿರವಾಗಿ ಒಳನುಗ್ಗಿ ವಿಡಿಯೋ ಮಾಡಿದ್ದರು. ಅಂದು ವಿಡಿಯೋ ಮಾಡಿದವರು ಹಾಗೂ ಕಳ್ಳತನ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು | ರೈಲಿಗೆ ಸಿಲುಕಿ ನಿವೃತ್ತ ಎಎಸ್ಐ ಆತ್ಮಹತ್ಯೆ



















