ಬೆಂಗಳೂರು : 19ನೇ ಆವೃತ್ತಿಯ ಐಪಿಎಲ್ ಮೊದಲ ಪಂದ್ಯ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂತಸದಿಂದ ಸಂಭ್ರಮಿಸಿದ್ದರೂ, ಅದರೆ ಪಂದ್ಯಾವಳಿ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಮುಗಿದ ಬಳಿಕ ಹೊರಬರುತ್ತಿದ್ದ ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮೊಬೈಲ್ ಕಳ್ಳತನಕ್ಕೆ ಕೈ ಹಾಕಿದ್ದಾರೆ. ಮೊಬೈಲ್‌ಗಳ ಜೊತೆಗೆ ಪಿಕ್‌ಪಾಕೆಟ್ ಪ್ರಕರಣಗಳೂ ಹೆಚ್ಚಾಗಿ ಕಂಡುಬಂದಿವೆ.
ಈ ಸಂಬಂಧ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೆಲವರು ನೇರವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದರೆ, ಇನ್ನೂ ಕೆಲವರು ಇ-ಲಾಸ್ಟ್ ಮೂಲಕ ದೂರು ಸಲ್ಲಿಸಿದ್ದಾರೆ.
ಗೇಟ್ ನಂ.3 ಬಳಿ ಹೆಚ್ಚು ಕಳ್ಳತನ ಪ್ರಕರಣಗಳು ನಡೆದಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.


















