ಬೆಂಗಳೂರು: ವರ ಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಿರುತ್ತಾರೆ. ಈ ವೇಳೆ ಚಿನ್ನಾಭರಣಗಳಿಂದ ಅಲಂಕಾರ ಮಾಡಿರುತ್ತಾರೆ. ಇತ್ತೀಚೆಗೆ ಜನರು ಸಾಮಾಜಿಕ ಜಾಲತಾಣದೊಂದಿಗೆ ಹೆಚ್ಚು ನಂಟು ಬೆಳೆಸಿಕೊಂಡಿದ್ದರಿಂದಾಗಿ ಅವುಗಳಲ್ಲಿ ಫೋಟೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿರುತ್ತಾರೆ. ಆದರೆ, ಹೀಗೆ ಸಂಭ್ರಮಿಸುವಾಗ ಎಚ್ಚರಿಕೆ ಇರಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಮನೆಯಲ್ಲಿ ಕೂರಿಸುವ ಲಕ್ಷ್ಮೀ ದೇವಿಯ ಮೈ ಮೇಲೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಕಿ, ಗರಿ ಗರಿ ಎನ್ನುವ ನೋಟುಗಳ ಕಂತೆಯನ್ನು ದೇವರ ಮುಂದಿಟ್ಟು ಪೂಜೆ ಮಾಡುತ್ತಾರೆ. ಹೀಗೆ ಅದ್ಧೂರಿಯಾಗಿ ಅಲಂಕಾರ ಮಾಡಿ ವಿಜೃಂಭಣೆಯಿಂದ ಹಬ್ಬ ಆಚರಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರವಾಗಿರಿ ಎಂದು ಪೊಲೀಸರು ತಿಳಿಸಿದ್ದಾರೆ.
ಫೋಟೋ ಮತ್ತು ವಿಡಿಯೋ ಮಾಡಿಕೊಂಡಲ್ಲಿ ನಿಮ್ಮ ಮನೆಯಲ್ಲಿ ಯಾವ ಯಾವವ ಆಭರಣಗಳಿವೆ? ಎಷ್ಟು ಮೌಲ್ಯದ ಆಭರಣಗಳಿವೆ? ಪ್ರಸ್ತುತ ಎಷ್ಟು ಹಣ ನಿಮ್ಮ ಮನೆಯಲ್ಲಿದೆ ಎಂಬುವುದು ಕಳ್ಳರಿಗೂ ಕೂಡ ನೋಡಲು ಅನುಕೂಲ ಆಗುತ್ತದೆ. ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂ ರೀಲ್ಸ್, ಫೇಸ್ ಬುಕ್ ರೀಲ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ನಿಮ್ಮ ಮನೆಯಲ್ಲಿ ಕಳ್ಳತನ ಮಾಡಲು ಅವರು ಹೊಂಚು ಹಾಕಬಹುದು. ಹೀಗಾಗಿ ಎಚ್ಚರಿಕೆ ಇರಲಿ ಎಂದು ಸಲಹೆ ನೀಡಿದ್ದಾರೆ.
ವರ ಮಹಾಲಕ್ಷ್ಮಿ ಹಬ್ಬದ ವೇಳೆ ಅರಿಶಿಣ, ಕುಂಕುಮಕ್ಕೆ ಮಹಿಳೆಯನ್ನು ಕರೆಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಲಕ್ಷ್ಮೀ ದೇವಿಯ ಮೇಲೆ ಚಿನ್ನಾಭರಣ ಮತ್ತು ಮುಂದೆ ಹಣವನ್ನು ಇಟ್ಟು ಪೂಜೆ ಮಾಡಿರುವುದು ನಿಮ್ಮ ಮನೆಗೆ ಬರುವ ಅತಿಥಿಗಳ ಕಣ್ಣಿಗೂ ಬೀಳುತ್ತದೆ. ನಿಮ್ಮ ಮನೆಗೆ ಬರುವ ಎಲ್ಲರ ಮೇಲೂ ಗಮನವಿರಲಿ. ಯಾರೇ ಅಪರಿಚಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ. ಒಂದು ವೇಳೆ ಅಪರಿಚಿತರು ಬಂದಲ್ಲಿ ಅವರನ್ನು ಪ್ರಶ್ನೆ ಮಾಡಿ, ಪೂರ್ವಾಪರ ವಿಚಾರಿಸಿ. ಒಂದು ವೇಳೆ ಅವರ ಮೇಲೆ ಅನುಮಾನ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ನೆಲಮಂಗಲ ಟೌನ್ ಪೊಲೀಸ್ ಠಾಣಾಧಿಕಾರಿ ಎಸ್.ಡಿ. ಶಶಿಧರ್ ಅವರನ್ನು ಸಂಪರ್ಕಿಸಿದಾಗ “ಪೂಜೆ ಮಾಡಿದ ವೇಳೆ ಲಕ್ಷ್ಮೀಯನ್ನು ಕೂರಿಸಿ ಭಕ್ತಿಗಾಗಿ ರಾತ್ರಿ ಹಾಗೆಯೇ ಬಿಡುವುದಿದ್ದಲ್ಲಿ ಎಚ್ಚರ ತಪ್ಪದಂತೆ ಸಲಹೆ ಇತ್ತರು. ಮನೆಯ ಕಿಟಕಿಗಳು, ಕಿಂಡಿಗಳ ಬಗ್ಗೆ ಎಚ್ಚರಿಕೆ ವಹಿಸಿ. ನೀವು ಮಲಗಿದಾಗ ಕಿಟಕಿ, ಕಿಂಡಿಗಳನ್ನು ತೆರೆದಿಟ್ಟಲ್ಲಿ ಅಲ್ಲಿಂದ ಕಳ್ಳರು ದೇವರ ಮೇಲಿರುವ ಆಭರಣ ಮತ್ತು ಹಣವನ್ನು ಕದಿಯುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಳ್ಳಿ . ಆಡಂಬರ, ಆಚರಣೆಯ ನೆಪದಲ್ಲಿ ಮೈ ಮರೆಯದಿರಿ ಎಂದು ಎಚ್ಚರಿಸಿದರು.