ಕೋಲಾರ: ಪಕ್ಷದಲ್ಲಿ ನನ್ನನ್ನ ಗುಲಾಮರಂತೆ ಕಾಣುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದುಸ್ಥಿತಿ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರ ನಡುವೆ ಸಂಬಂಧವಿಲ್ಲ. ಚುನಾವಣೆ ವಿಚಾರಕ್ಕೆ ಫೋನ್ ಕರೆ ಮಾಡಿದರೆ, ಅಗೌರವವಾಗಿ ಮಾತನಾಡುತ್ತಾರೆ. ಪಕ್ಷದಲ್ಲಿ ಬಹಳಷ್ಟು ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ ಅವರು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಕಿಡಿಕಾರಿದ್ದಾರೆ.
ಈ ಸಂಬಂಧಿಸಿದಂತೆ ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಜಾನಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ, ಚಂದ್ರಾರೆಡ್ಡಿ, ವಿ.ಆರ್ ಸುದರ್ಶನ್ ಅವರಿಂದಲೇ ಕಾಂಗ್ರೆಸ್ ಭಿನ್ನಮತವನ್ನು ಸರಿಪಡಿಸಲು ಆಗಲಿಲ್ಲ. ಕೋಲಾರದಲ್ಲಿ ನಮ್ಮ ಪರಿಸ್ಥಿತಿ ಆ ದೇವರಿಗೆ ಗೊತ್ತಿದೆ ಎಂದಿದ್ದಾರೆ.