ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳನ್ನು ದೇವರೆಂದು ಪೂಜಿಸುತ್ತೇವೆ. ಮೂಕ ಪ್ರಾಣಿಗಳ ಮೇಲೆ ಪ್ರತಿಯೊಬ್ಬರು ದಯೆ ತೋರಿಸುವುದು ಮಾನವೀಯತೆಯ ಲಕ್ಷಣ. ಆದರೆ, ರಸ್ತೆಯ ಮೇಲೆ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಹಸುವಿನ ಮೇಲೆ ದುಷ್ಕರ್ಮಿಗಳು ಆಸಿಡ್ ಹಾಗೂ ಕಾದ ಎಣ್ಣೆ ಸುರಿದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೋಲಾರ- ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ನೀಚ ಬುದ್ಧಿಯ ದುಷ್ಕರ್ಮಿಗಳು ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ. ಪರಿಣಾಮ ಹಸು ನೋವು ತಾಳಲಾರದೆ ಒದ್ದಾಡಿದೆ. ಹಸುವಿನ ಮೇಲಿನ ಚರ್ಮ ಸುಲಿದಿದೆ. ರಸ್ತೆ ತುಂಬೆಲ್ಲ ರಕ್ತ ಹರಡಿದೆ. ಹಸು ರೋದಿಸಿದ್ದು, ಮೂಕ ಪ್ರಾಣಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನು ಕಂಡು ಜನರು ಮಮ್ಮಲ ಮರುಗಿದ್ದಾರೆ.
ಕೃತ್ಯ ಎಸಗಿದ ನೀಚರು ಘಟನೆಯ ನಂತರ ಪಾರರಿಯಾಗಿದ್ದಾರೆ. ಈ ಘಟನೆಗೆ ಭಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಲ್ ಪೇಟೆ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.
ಗಾಯಗೊಂಡ ಹಸುವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.ಬೀಡಾಡಿ ಹಸುವಿನ ಮೇಲೆ ಆ್ಯಸಿಡ್ ಹಾಗೂ ಕಾದಿರುವ ಎಣ್ಣೆ ಸುರಿದು ಗಾಯಗೊಳಿಸಿ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.