ತುಮಕೂರು: ಕೋರ್ಟ್ ಆವರಣಕ್ಕೆ ನುಗ್ಗಿದ್ದ ಬೀದಿ ನಾಯಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗುಬ್ಬಿ ಕೋರ್ಟ್ ಆವರಣದಲ್ಲಿ ನಡೆದಿದೆ. ಹಾಡಹಗಲೇ ಕೋರ್ಟ್ ಆವರಣದಲ್ಲಿ ಮಹಿಳೆಯ (woman) ಮೇಲೆ ಬೀದಿ ನಾಯಿ ದಾಳಿ ಮಾಡಿ ಮುಖ ಕಚ್ಚಿ ಗಾಯಗೊಳಿಸಿದೆ. ಸದ್ಯ ಮಹಿಳೆಯು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ರೊಚ್ಚಿಗೆದ್ದ ಸ್ಥಳೀಯರು ನಾಯಿಯನ್ನು ಹೊಡೆದು ಕೊಂದಿದ್ದಾರೆ.
ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಬೀರಸಂದ್ರದ ನಿವಾಸಿ ಗಂಗಾಭವಾನಿ ಎಂಬುವವರ ಮೇಲೆಯೇ ನಾಯಿ ದಾಳಿ ನಡೆಸಿದೆ. ಗಂಗಾಭವಾನಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಪತಿಯೊಂದಿಗೆ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.
ಹೀಗಾಗಿ ಅವರು ಕೋರ್ಟ್ ಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಕೋರ್ಟ್ ನಲ್ಲಿ ಮಹಿಳೆ ಶೌಚಾಲಯಕ್ಕೆ ಹೋಗಿದ್ದಾರೆ. ಅಲ್ಲೇ ಇದ್ದ ಬೀದಿನಾಯಿಯೊಂದು ಅವರ ಮೇಲೆ ದಾಳಿ ಮಾಡಿದೆ. ಕೂಡಲೇ ಸಹೋದರ ಕೂಡ ಅವರ ರಕ್ಷಣೆಗೆ ಹೋಗಿದ್ದು, ಈ ವೇಳೆ ನಾಯಿ ಅವರ ಕೈಗಳಿಗೂ ಕಚ್ಚಿದೆ ಎನ್ನಲಾಗಿದೆ. ಆನಂತರ ಅಲ್ಲಿದ್ದ ಸ್ಥಳೀಯರು ನಾಯಿಯನ್ನು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ.