ಚಿಕ್ಕಬಳ್ಳಾಪುರ : ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ನಂತರ ಕೆಲವು ಮಹಿಳೆಯರು ಪ್ರವಾಸ, ತವರು ಮನೆ, ನೆಂಟರ ಮನೆಗಳಿಗೆಂದು ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಬಸ್ ಹತ್ತುತ್ತಾರೆ. ಆದರೆ ಅಂಥವರನ್ನೇ ಟಾರ್ಗೆಟ್ ಮಾಡಿದ್ದ ಕಳ್ಳಿಯರ ಗ್ಯಾಂಗ್, ತುಂಬಿದ್ದ ಬಸ್ ಹತ್ತಿ ಮಹಿಳೆಯರ ಚಿನ್ನಾಭರಣಗಳಿಗೆ ಕನ್ನ ಹಾಕುತ್ತಿದ್ದರು. ಈಗ ಆ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ.
ಕಲಬುರಗಿ ಮೂಲದ ತುಳಸಿ(22), ಪ್ರೇಮಾ(21), ಸೋನಿಯಾ(25) ಬಂಧನಕೊಳಪಟ್ಟ ಮಹಿಳೆಯರು.
ಮಹಿಳೆಯರು ತುಂಬಿದ ಬಸ್‌ಗಳನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳಿಯರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಇವರು ಮಹಿಳೆಯರ ಬ್ಯಾಗ್‌ನಲ್ಲಿದ್ದ ಹಣ, ಕತ್ತಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಆದರೆ, ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ, ಇತ್ತೀಚಿಗೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಸಿಸಿಟಿವಿಯಲ್ಲಿ ದಾಖಲಾದ ವೀಡಿಯೋ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದರು. ಕೊನೆಗೆ ಚಿಕ್ಕಬಳ್ಳಾಪುರದಿಂದ ಕಲಬುರಗಿವರೆಗೂ ಪ್ರಯಾಣ ಮಾಡಿ ಮೂವರು ಕಳ್ಳಿಯರನ್ನು ಬಂಧಿಸಿದ್ದಾರೆ. ಬಂಧಿತ ಕಳ್ಳಿಯರಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಬಂದಿದೆ.