ನವ ದೆಹಲಿ: ಭಾರತವು ಫೆಬ್ರವರಿ 20ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ತನ್ನ ಅಭಿಯಾನ ಪ್ರಾರಂಭಿಸಲಿದೆ. ಗುಂಪು ‘ಎ’ ಯಲ್ಲಿರುವ ಭಾರತ ತಂಡ ಬಳಿಕ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳೊಂದಿಗೆ ಸ್ಪರ್ಧಿಸಲಿದೆ. ಪಾಕಿಸ್ತಾನ ವಿರುದ್ಧ ಫೆಬ್ರವರಿ 23ರಂದು ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಮಾರ್ಚ್ 2ರಂದು ಪ್ರಮುಖ ಪಂದ್ಯಗಳನ್ನು ಆಡಲಿದೆ.
ಭಾರತದ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿದ್ದರೂ, ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಕಂಡುಬರುತ್ತಿದೆ. ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಇದ್ದು , ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಬೆಂಬಲವೂ ಬೇಕಾಗಿದೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ಟೂರ್ನಮೆಂಟ್‌ನಿಂದ ಹೊರಗುಳಿದಿರುವುದು ‘ಮೆನ್ ಇನ್ ಬ್ಲೂ’ ಗೆ ದೊಡ್ಡ ನಷ್ಟ ಎನಿಸಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಏಕ ದಿನ ತಂಡಕ್ಕೆ ಹೊಸ ಸೇರ್ಪಡೆಗೊಂಡ ಹರ್ಷಿತ್ ರಾಣಾ, ಮೊಹಮ್ಮದ್ ಶಮಿಯ ಜೊತೆಗೆ ಪ್ರಧಾನ ವೇಗದ ಬೌಲರ್ ಆಗಿ ಆಡಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಹೊಸ ವರದಿ ಅದನ್ನು ತಳ್ಳಿ ಹಾಕಿದ್ದು, ಈಗ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಮೊದಲ ಪಂದ್ಯಕ್ಕಾಗಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಆರು ವಿಕೆಟ್ ಪಡೆದ ಹರ್ಷಿತ್
ಹರ್ಷಿತ್ ರಾಣಾ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳನ್ನು ಆಡಿದ್ದು, 6 ವಿಕೆಟ್ ಪಡೆದಿದ್ದರು. ಅದೇ ಸಮಯದಲ್ಲಿ, ಅರ್ಷದೀಪ್ ಸಿಂಗ್ ಒಂದೇ ಪಂದ್ಯವಾಡಿ 2 ವಿಕೆಟ್ ಪಡೆದರು. ಆದಾಗ್ಯೂ, ಹರ್ಷಿತ್ ರಾಣಾ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. ಅಗತ್ಯವಿದ್ದರೆ ಮಾತ್ರ ಆಡುವ ಅವಕಾಶ ಇರಬಹುದು.
ಅರ್ಷದೀಪ್ ಸಿಂಗ್ ಕೇವಲ 9 ಏಕದಿನ ಪಂದ್ಯಗಳನ್ನು ಆಡಿದ್ದರೂ, ಮೊಹಮ್ಮದ್ ಶಮಿಯ ನಂತರ ತಂಡದ ಎರಡನೇ ಪ್ರಮುಖ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಜೊತೆಗೆ, ಟಿ20 ಕ್ರಿಕೆಟ್‌ನಲ್ಲಿ ಅವರು ಭಾರತಕ್ಕೆ ಟಾಪ್ ವಿಕೆಟ್-ಟೇಕರ್ ಆಗಿದ್ದಾರೆ
“ಹರ್ಷಿತ್ ರಾಣಾ ಈ ಋತುವಿನಲ್ಲಿ ಭಾರತದ ಹೊಸ ತಲೆಮಾರಿನ ವೇಗದ ಬೌಲರ್‌ಗಳ ನಡುವೆ ಗಮನ ಸೆಳೆದಿದಿರುವ ಜತೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಹುಡುಕಾಟದ ಫಲವಾಗಿ ತಂಡ ಸೇರಿದ್ದಾರೆ. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಆಟಗಾರರ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಅವರ ಸಾಮರ್ಥ್ಯ ಮತ್ತು ಗುಣಮಟ್ಟದಿಂದಾಗಿ ಅವರು ಅವಕಾಶ ಪಡೆಯಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳಲ್ಲೂ ಹರ್ಷಿತ್ ರಾಣಾ ಆಡಲು ಒಂದು ಕಾರಣವಿದೆ. ಕೋಚ್ ಗೌತಮ್ ಗಂಭೀರ್, ತಂಡವು ಜಸ್ಪ್ರೀತ್ ಬುಮ್ರಾ ಅವರ ಬದಲಿಗಾಗಿ ಹುಡುಕುತ್ತಿದ್ದರು. ಜೊತೆಗೆ, ಮೊಹಮ್ಮದ್ ಶಮಿಯ ಫಿಟ್‌ನೆಸ್ ಪರೀಕ್ಷಿಸಲು ಇದು ಏಕೈಕ ಸರಣಿ ಆಗಿತ್ತು. ಹಾಗಾಗಿ ಅರ್ಷದೀಪ್ ಸಿಂಗ್ ಅವರಿಗೆ ಮೊದಲ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು. ಶಮಿಗೆ ವಿಶ್ರಾಂತಿ ಕೊಟ್ಟಾಗ ಮಾತ್ರ ಅವರಿಗೆ ಅವಕಾಶ ನೀಡಲಾಗಿತ್ತು.
ಗೌತಮ್ ಪ್ರಿಯ
ಗೌತಮ್ ಗಂಭೀರ್ ಹರ್ಷಿತ್ ರಾಣಾಗೆ ಭಾರತೀಯ ತಂಡದಲ್ಲಿ ಅವಕಾಶ ಸಿಗಲು ಪ್ರಮುಖ ಕಾರಣರಾಗಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ರಾಣಾ ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಭಾರತ ತಂಡದ ಪರ ಆಡಿದ್ದಾರೆ. ಕಳೆದ ವರ್ಷ ಐಪಿಎಲ್ನಲ್ಲಿ ಗಂಭೀರ್ ಕೋಚ್ ಆಗಿದ್ದಾಗ, ಆ ತಂಡದ ಪ್ರಧಾನ ಬೌಲರ್ ಆಗಿ ಹರ್ಷಿತ್ ರಾಣಾ ಆಡಿದ್ದರು.