ಬೆಂಗಳೂರು: ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ರೌಡಿಸಂ ಮತ್ತೆ ತಲೆದೋರಿದ್ದು, ವಿದ್ಯಾರ್ಥಿಯೊಬ್ಬನ ಮೇಲೆ ಒಂದು ಗುಂಪು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ತಡರಾತ್ರಿ ಸುಮಾರು 1:30ರ ಸುಮಾರಿಗೆ PG 3 ಹಾಸ್ಟೆಲ್ ಹೊರಭಾಗದಲ್ಲಿ ಅಭಿಷೇಕ್ ಎಂಬ ವಿದ್ಯಾರ್ಥಿಯ ಮೇಲೆ ಅರುಣ್ ಮತ್ತು ಅವನ ಸ್ನೇಹಿತರ ಗುಂಪು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅರುಣ್, ದೀಕ್ಷಿತ್, ವಿನಯ, ಅಕ್ಷಯ ಸೇರಿದಂತೆ ಕೆಲವರಿಂದ ಈ ದಾಳಿ ನಡೆದಿದ್ದು, ಹೊರಗಿನಿಂದಲೂ ಕೆಲವರನ್ನು ಕರೆಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಭಿಷೇಕ್ ಜಿಯೋಗ್ರಫಿ 3ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾನೆ.
ಸಣ್ಣ ವಿಚಾರವಾದ ನೀರು ಕುಡಿಯುವ ವಿಷಯದಿಂದಲೇ ಗಲಾಟೆ ಆರಂಭವಾಗಿದೆ ಎಂದು ತಿಳಿದುಬಂದಿದೆ. ಅಭಿಷೇಕ್ ಸ್ನೇಹಿತನ ಮೇಲೆ ಮೊದಲು ಹಲ್ಲೆ ನಡೆಸಲಾಗಿದ್ದು, ಅದನ್ನು ಪ್ರಶ್ನಿಸಿದ ಅಭಿಷೇಕ್ ಮೇಲೂ ಬಳಿಕ ದಾಳಿ ನಡೆದಿದೆ ಎನ್ನಲಾಗಿದೆ.
ಆರೋಪಿಯಾಗಿರುವ ಅರುಣ್ ವಿರುದ್ಧ ಈಗಾಗಲೇ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಅಭಿಷೇಕ್ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಭದ್ರತೆ ಮತ್ತು ಆಡಳಿತ ಕ್ರಮಗಳ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಪೊಲೀಸರಿಂದಲೇ ಹೆಲ್ಮೆಟ್ ರಹಿತ ಚಾಲನೆ.. ಸಾರ್ವಜನಿಕರ ಆಕ್ರೋಶ!


















