ಹುಬ್ಬಳ್ಳಿ : ಸಂಕ್ರಾಂತಿಯ ನಂತರ ಸಂಪುಟ ವಿಸ್ತರಣೆಯಾಗಲಿದೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡದಿರುವಂತೆ ಕಟ್ಟಪ್ಪಣೆಯಾಗಿದೆ. ಸಂಕ್ರಾಂತಿ ನಂತರ ಯಾವುದೇ ಕ್ರಾಂತಿ ಆಗಲ್ಲ ಎಂದು ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಲಕ್ಷ್ಮಣ ರೇಖೆ ದಾಟದಿರುವಂತೆ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ, ಜನವರಿ ತಿಂಗಳಲ್ಲಿ ಸಂಪುಟ ಪುನರ್ರಚನೆಯಾಗುತ್ತೆ ಅನ್ನೋ ಮಾತಿದೆ. ಶೇ. 50 ರಷ್ಟು ಪ್ರತಿಷತ ಮಂತ್ರಿಗಳಿಗೆ ಪಕ್ಷದ ಜವಾಬ್ದಾರಿ ನೀಡಬೇಕು. ಶೇ. 50 ರಷ್ಟು ಹೊಸಬರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಬೇಕು. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಹೈಕಮಾಂಡ್, ಸಿಎಂ ಮತ್ತು ಡಿಸಿಎಂ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಪ್ರಧಾನಿ ಮೋದಿ ರೀತಿ ಡಿಕ್ಟೇಟರ್ ಶಿಪ್ ಇಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ, 2023 ರಲ್ಲಿ ಮೊದಲ ಸಂಪುಟದಲ್ಲಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಸಂಪುಟ ಪುನರ್ರಚನೆಯಲ್ಲಿ ನನಗೆ ಅವಕಾಶ ಸಿಗಲಿದೆ ಅನ್ನೋ ವಿಶ್ವಾಸವಿದೆ. 20 ವರ್ಷಗಳಿಂದಲೂ ಈ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿಲ್ಲ. ಮಂತ್ರಿಯಾಗೋ ವಿಶ್ವಾಸ ನನಗಿದೆ. ಮಹಾತ್ಮಾಗಾಂಧಿ ನರೇಗಾ ಯೋಜನೆ ಹೆಸರು ಬದಲಾವಣೆಗೆ ಕಿಡಿಕಾರಿದ್ದಾರೆ.
ಮಹಾತ್ಮಾ ಗಾಂಧಿ ಅಂದರೆ ಬಿಜೆಪಿಗೆ ಅಸಡ್ಡೆ. ಈ ಕಾರಣಕ್ಕೆ ರಾಮ್ ಜಿ ಅಂತ ಹೆಸರು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ವಿರುದ್ಧ ದೇಶಾದ್ಯಂತ ಹೋರಾಟ ಮಾಡ್ತೇವೆ. ಕೋಗಿಲು ಬಡಾವಣೆಯಲ್ಲಿ ಯಾವುದೇ ಸಮುದಾಯದ ಓಲೈಕೆ ಮಾಡ್ತಿಲ್ಲ. ಅಲ್ಪಸಂಖ್ಯಾತರ ತುಷ್ಠೀಕರಣದ ಮಾತೇ ಇಲ್ಲ ಅನ್ಯಾಯ ಆದವರಿಗೆ ನ್ಯಾಯ ಕೊಡಿಸ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪ್ರತಿಭಟನೆ ವೇಳೆ PSI ಕೆನ್ನೆಗೆ ಬಾರಿಸಿದ ಸ್ವಾಮೀಜಿ | ಅಷ್ಟಕ್ಕೂ ನಡೆದಿದ್ದೇನು?



















