ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಿಕ್ ಸಾಬ್ ಕೊಲೆ ಮಾಡಿರುವ ಆರೋಪಿ ಹಾಗೂ ಮುಳಗುಂದ ಪಟ್ಟಣದ ಜೈಬುನ್ನಿಸಾ ಕಿಲ್ಲೇದಾರ ಕೊಲೆಯಾಗಿರುವ ದುರ್ದೈವಿ. ಇವರಿಬ್ಬರು ಸಂಬಂಧಿಗಳಾಗಿದ್ದರು. ಸಂಬಂಧದಲ್ಲಿ ಅಣ್ಣ ಹಾಗೂ ತಂಗಿ ಆಗುತ್ತಿದ್ದರು.
ಮಲ್ಲಿಕ್ ಸಾಬ್ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ. ಇದಕ್ಕೆ ತಂಗಿ ಅಡ್ಡಿಯಾಗಿದ್ದಳು. ಈ ವಿಷಯವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಆದರೆ, ಸಹೋದರಿಯ ಮಾತು ಲೆಕ್ಕಿಸದೆ ಅಣ್ಣ ಮನೆ ಕಟ್ಟಿಸಲು ಆರಂಭಿಸಿದ್ದಾನೆ. ಇದರಿಂದ ಕೋಪಗೊಂಡ ತಂಗಿ ಜೈಬುನ್ನಿಸಾ ಇಂದು ಕಣವಿ ಗ್ರಾಮಕ್ಕೆ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಅದು ವಿಕೋಪಕ್ಕೆ ತಿರುಗಿ, ಕೋಪದಲ್ಲಿ ಅಣ್ಣ ಮಲ್ಲಿಕಸಾಬ್ ಸಲಾಕಿಯಿಂದ ತಂಗಿ ಜೈಬುನ್ನಿಸಾ ಕಿಲ್ಲೇದಾರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ತಂಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೊಲೆಯಾದ ನಂತರ ಆರೋಪಿ ಮಲ್ಲಿಕಸಾಬ್ ನೇರವಾಗಿ ಮುಳಗುಂದ ಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಷಯ ತಿಳಿದ ತಕ್ಷಣ ಗದಗ ಡಿವೈಎಸ್ಪಿ ಜಾಕೀರ್ ಹುಸೇನ್ ಇಮಾಮದಾರ, ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.