ಬೆಂಗಳೂರು: ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ. 4ರಷ್ಟು ಮೀಸಲಾತಿ ವಿರೋಧಿಸುತ್ತೇವೆ. ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೆಂದ್ರ (B Y Vijayendra) ಎಚ್ಚರಿಸಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರ ಕಣ್ತಪ್ಪಿಸಿ ಸದನದಲ್ಲಿ ಮಸೂದೆ ಮಂಡಿಸಿದ್ದಾರೆ. ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಬಿಜೆಪಿಯು ಸಿದ್ದರಾಮಯ್ಯರ ನೇತೃತ್ವದ ಸರ್ಕಾರದ ತುಘಲಕ್ ದರ್ಬಾರನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ. ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಇದನ್ನು ವಿರೋಧಿಸುತ್ತದೆ. ಅಗತ್ಯವಿದ್ದಲ್ಲಿ ರಾಜ್ಯ ಹೈಕೋರ್ಟ್ ನಲ್ಲೂ ಪ್ರಶ್ನಿಸುತ್ತೇವೆ ಎಂದಿದ್ದಾರೆ.
ಇವರ ದುರಾಡಳಿತಕ್ಕೆ ಇತಿಮಿತಿ ಇದೆ. ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ಹೊರಟಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ನಿಜವಾಗಿ ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ಇದ್ಯಾ? ಸ್ವಾತಂತ್ರ‍್ಯ ಬಂದ ಬಳಿಕ ಸುಮಾರು 50-55 ವರ್ಷ ಸುದೀರ್ಘವಾಗಿ ಈ ದೇಶದಲ್ಲಿ, ರಾಜ್ಯದಲ್ಲಿ ಆಡಳಿತ ನಡೆಸಿದ್ದೀರಿ. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ಕೊಟ್ಟು ಅವರನ್ನು ಮುಂಚೂಣಿಯಲ್ಲಿ ತರುವ ಕೆಲಸವನ್ನು ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಮುಂದಕ್ಕೆ ತರುವ ಇಚ್ಛಾಶಕ್ತಿ ಕಾಂಗ್ರೆಸ್ಸಿನವರಿಗೆ ಇರಲಿಲ್ಲ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಸಿದ್ದರಾಮಯ್ಯನವರು ಬಿಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿಜೀ ಅವರ ಕೇಂದ್ರ ಸರ್ಕಾರವು ಜನ್‌ಧನ್, ಉಜ್ವಲ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಕೊಟ್ಟಿದ್ದು, ಅವುಗಳನ್ನು ಕೇವಲ ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ. ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆ ಕೇವಲ ಹಿಂದೂಗಳಿಗೆ ನೀಡಿಲ್ಲ ಎಂದು ಹೇಳಿದ್ದಾರೆ.