ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಾನಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಿಎಂ ಹಲವಾರು ಸಲಹೆ- ಸೂಚನೆ ನೀಡಿದರು. ಶೇಕಡಾವಾರು ತೀವ್ರ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳ ಪ್ರತಿ ವರ್ಷ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಶೇ. 1ರಷ್ಟು ಕಡಿಮೆ ಮಾಡಿಕೊಂಡು ಹೋಗಲು ಸಾಧ್ಯವಿದೆ. ಒಂದೇ ಸಾರಿಗೆ ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಾಮಾಜಿಕ ಕಾರಣಗಳೂ ಇವೆ. ಹೀಗಾಗಿ ಶೇ. 1ರಷ್ಟು ಪ್ರಮಾಣ ಕಡಿಮೆ ಮಾಡಿಕೊಂಡು ಬಂದರೆ ಅಪೌಷ್ಠಿಕ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನುವ ಸೂಚನೆ ನೀಡಿದರು. ಬೀದರ್, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಈ ಸೂಚನೆ ನೀಡಿದರು.
ಮಕ್ಕಳ ಹಿಮೋಗ್ಲೋಬಿನ್ ಪ್ರಮಾಣ ಸೇರಿ ಅವರ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಹಾಲು, ಮೊಟ್ಟೆ, ಮಾತ್ರೆ ಎಲ್ಲವನ್ನೂ ಕೊಡುತ್ತಿದ್ದರೂ ಏಕೆ ಕೆಲವು ಕಡೆ ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕ ಮಟ್ಟ ಮಾತ್ರ ಸುಧಾರಿಸುತ್ತಿಲ್ಲ ಎನ್ನುವ ಬಗ್ಗೆ ವೈಜ್ಞಾನಿಕ ವರದಿ ನೀಡಿ, ವರದಿ ಆಧಾರದಲ್ಲಿ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಬಹುದು ಎಂದು ಸಿಎಂ ತಿಳಿಸಿದರು.