ಬೆಂಗಳೂರು: ಈ ಬಾರಿ ರಾಜ್ಯದಲ್ಲಿನ ಎಲ್ಲ ಶಾಲೆಗಳಲ್ಲಿನ 5, 8, 9 ಹಾಗೂ ಪಿಯು ಕಾಲೇಜುಗಳ 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನವಿರುವ ಹಿನ್ನೆಲೆಯಲ್ಲಿ ಈ ಬಾರಿ ಮಂಡಳಿ ಪರೀಕ್ಷೆ ಇರುವುದಿಲ್ಲ ಎಂದಿದ್ದಾರೆ. ಹೀಗಾಗಿ ಈ ಹಿಂದೆ ಇದ್ದಂತೆ 5, 8 ಮತ್ತು 9ನೇ ತರಗತಿಗೆ ಶಾಲಾ ಹಂತದಲ್ಲೇ ಸಂಕಲನಾತ್ಮಕ ಮೌಲ್ಯಮಾಪನ-2 (ಎಸ್‌ಎ-2) ಹಾಗೂ 11ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ಹೇಳಿದ್ದಾರೆ.
ಮಂಡಳಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಕೆಲ ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿವೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಡಳಿ ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಿದೆ. ಹೀಗಾಗಿ ಕಳೆದ ವರ್ಷದ ಫಲಿತಾಂಶವನ್ನು ತಡೆಹಿಡಿದಿದ್ದು, ನಡವಳಿಕೆ ಕುರಿತಂತೆ ಹೊರಡಿಸಿದ್ದ ಆದೇಶವನ್ನೂ ಹಿಂಪಡೆಯಲಾಗಿದೆ. ಈ ಎಲ್ಲ ವಿಷಯಗಳ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಯುವುದಿಲ್ಲ ಎಂದಿದ್ದಾರೆ.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ನಡೆಯುವ ಮಂಡಳಿ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಿಗೆ ಸಂಪೂರ್ಣ ಸಿಸಿಟಿವಿ ಕ್ಯಾಮರಾ, ವೆಬ್ ಕಾಸ್ಟಿಂಗ್‌ನಂತಹ ಸುಧಾರಣಾ ಕ್ರಮಗಳನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.