ಸಾವಿರಾರು ಜನರ ಮುಂದೆ ನನಗೆ ಅಪಮಾನವಾಗಿದೆ. ತುಂಬಿದ ಸಭೆಯಲ್ಲಿ ನನ್ನ ಗೌರವ ಮಣ್ಣು ಪಾಲಾಗಿದೆ ಎಂದು ಧಾರವಾಡದ ಹೆಚ್ಚುವರಿ ಎಸ್ ಪಿ ನಾರಾಯಣ ಭರವನಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ.
ಹೌದು! ಏಪ್ರಿಲ್ 29ರಂದು ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಂದು ಎಸಿಪಿಯಾಗಿದ್ದ ನಾರಾಯಣ ಭರಮನಿ ಮೇಲೆ ಸಿಎಂ ಸಿದ್ದರಾಮಯ್ಯ ಕೋಪದಲ್ಲಿ ಕಪಾಳ ಮೋಕ್ಷ ಮಾಡಲು ಮುಂದಾಗಿದ್ದರು. ಈ ಘಟನೆಯಿಂದ ನೊಂದಿರುವ ನಾರಾಯಣ ಭರವನಿ ಸ್ವಯಂ ನಿವೃತ್ತಿಗೀಗ ಮನವಿ ಸಲ್ಲಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ತಾವು ಅಪಮರ್ಯಾದೆ ಅನುಭವಿಸಿದ್ದೇನೆ. ನನ್ನ ಮನಸ್ಸಿಗೆ ಈ ಘಟನೆ ತುಂಬಾ ನೋವು ತಂದಿದೆ. ನನ್ನನ್ನು ಸೇವೆಯಿಂದ ವಿಮುಕ್ತಗೊಳಿಸಿ ಅಂತಾ ಭರಮನಿ ಮನವಿ ಮಾಡಿದ್ದಾರೆ.
ತುಂಬಿದ ಸಭೆಯಲ್ಲಿ ನನಗಾದ ಅಪಮಾನದಿಂದ ಇನ್ನೂ ಹೊರ ಬರಲಾಗಿಲ್ಲ. ಹೋದ ಮಾನ ವಾಪಸ್ ಬರುತ್ತಾ? ಅಂತಾ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಹಾಗಂತಾ ಈ ಪತ್ರವನ್ನ ಅವರು ಜೂನ್ 12ರಂದೇ ಬರೆದಿರೋದು ಈಗ ಬಯಲಾಗಿದೆ. ಇದರ ನಡುವೆ, ಆ ಭಾಗದ ಓರ್ವ ಪ್ರಭಾವಿ ಸಚಿವರು ಭರಮನಿ ಅವರ ಮನವೊಲಿಕೆಗೆ ಯತ್ನಿಸಿದ್ದರು.
ಅಷ್ಟೇ ಅಲ್ಲಾ ಅವರನ್ನ ಬೆಂಗಳೂರಿಗೆ ಕರೆತಂದು ಡ್ಯಾಮೇಜ್ ಕಂಟ್ರೋಲ್ ಗೂ ಯತ್ನಿಸಿದ್ದರು. ಆದರೆ, ಅದ್ಯಾವುದಕ್ಕೂ ಸೊಪ್ಪು ಹಾಕದ ಭರವನಿ ಹೋದ ಮಾನ ಮತ್ತೆ ಬರುತ್ತಾ ಅಂತಾ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ಮೂರು ಪುಟಗಳ ಪತ್ರದಲ್ಲಿ ತಮಗಾದ ಅಪಮಾನವನ್ನು ಅವರು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.