ಅಮೆರಿಕ ಮತ್ತು ಚೀನಾ ಮಧ್ಯೆ ಸುಂಕ ಸಮರ ಈಗ ತಾರಕ್ಕೇರಿದೆ. ಟ್ರಂಪ್ ಎಚ್ಚರಿಕೆಗೆ ಜಗ್ಗದ ಬೀಜಿಂಗ್ ಆಡಳಿತ ವಿರುದ್ಧವೀಗ ಗದಾ ಪ್ರಹಾರವನ್ನೇ ಮಾಡಲಾಗಿದೆ. ಅಮೆರಿಕ ಉತ್ಪನ್ನಗಳ ಮೇಲೆ ಚೀನಾ ಶೇ. 34ರಷ್ಟು ಸುಂಕ ವಿಧಿಸಿತ್ತು. ಇದನ್ನು ರದ್ದುಗೊಳಿಸುವಂತೆ ಅಮೆರಿಕ ಮಂಗಳವಾರದವರೆಗೆ ಸಮಯ ನೀಡಿತ್ತು. ಆದರೆ, ಚೀನಾ ಮಾತ್ರ ಇದಕ್ಕೆ ಬಗ್ಗಿಲ್ಲ. ಈಗ ಅಮೆರಿಕ ಚೀನಾ ವಿರುದ್ಧ ಮಾರುಕಟ್ಟೆಲ್ಲಿ ಯುದ್ಧ ಸಾರಿದೆ.
ಅಮೆರಿಕವು ಈಗ ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ಶೇ. 50ರಷ್ಟು ತೆರಿಗೆ ವಿಧಿಸಿದೆ. ಈ ಮೂಲಕ ಡ್ರಾಗನ್ ನಾಡಿನ ಸರಕುಗಳ ಮೇಲೆ ಬರೋಬ್ಬರಿ ಶೇ. 104ರಷ್ಟು ಸುಂಕ ಬಿದ್ದಿದೆ. ನೂತನಸುಂಕ ನೀತಿ ಕಳೆದ ಮಧ್ಯರಾತ್ರಿಯಿಂದಲೇ ಅನ್ವಯ ಅಂತಲೂ ವೈಟ್ ಹೌಸ್ ಸ್ಪಷ್ಟಪಡಿಸಿದೆ.
ಇಬ್ಬರ ಜಗಳದಲ್ಲಿ ಮೂರನೆಯವರಿಗೂ ಗುನ್ನಾ
ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಈ ವ್ಯಾಪಾರ ಯುದ್ಧ ಜಾಗತಿಕ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಉಭಯ ದೇಶಗಳ ನಡುವೆ ಈ ಸಮರ ಹೀಗೆ ಮುಂದುವರೆದರೆ ಭಾರತವೂ ಸೇರಿದಂತೆ ಅನೇಕ ದೇಶಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೂ ಡೊನಾಲ್ಡ್ ಟ್ರಂಪ್ ಸುಂಕ ಹೇರಿದ್ದಾರೆ. ಏಪ್ರಿಲ್ 2ರಂದು ಲಿಬರೇಷನ್ ಡೇ ಎಂದು ಘೋಷಿಸಿ ಶ್ವೇತ ಭವನದಲ್ಲಿ ಎಲ್ಲಾ ದೇಶಗಳು ಅಮೆರಿಕದ ವಸ್ತುಗಳ ಮೇಲೆ ಹಾಕುತ್ತಿರುವ ಸುಂಕದ ಪ್ರಮಾಣ, ಅದಕ್ಕೆ ಟ್ರಂಪ್ ನಿಗದಿ ಮಾಡಿರುವ ಟಾರಿಫ್‌ನ ಲೆಕ್ಕದ ಪಟ್ಟಿಯನ್ನು ತೋರಿಸಿದ್ದರು.
ಈಗ ಅಮೆರಿಕ ಮತ್ತು ಚೀನಾ ದೇಶಗಳ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ. ಟ್ರಂಪ್ ಟಾರಿಫ್ ಘೋಷಣೆಯಿಂದ ತಳಮಳಗೊಂಡಿದ್ದ ಚೀನಾ ಅಮೆರಿಕ ಸರಕುಗಳ ಮೇಲೆ ಸುಂಕ ಹೆಚ್ಚಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಈಗ ಎಲ್ಲಾ ಚೀನಾ ಸರಕುಗಳ ಮೇಲಿನ ಸುಂಕವನ್ನು ಟ್ರಂಪ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿಸಿದ್ದಾರೆ. ಇದು ಚೀನೀಯರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.



















