ಚನ್ನಪಟ್ಟಣ: ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು, ಈ ಪೈಕಿ ಚನ್ನಪಟ್ಟಣ ಎಲ್ಲರನ್ನೂ ಆಕರ್ಷಿಸಿತ್ತು. ಈಗ ಚುನಾವಣೆ ಮುಗಿದಿದ್ದು, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಯಕರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಿಂಗಳುಗಳ ಕಾಲ ಕ್ಷೇತ್ರದಲ್ಲಿ ಸುತ್ತಾಡಿ ಇಂದು ರಿಲ್ಯಾಕ್ಸ್ ಮೂಡ್ ನಲ್ಲಿರುವ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯ ಆರಂಭದಲ್ಲಿ ನಾನು ಅಭ್ಯರ್ಥಿ ಆಗಿರಲಿಲ್ಲ. ಆದರೆ, ಕೊನೆಯ ಗಳಿಗೆಯಲ್ಲಿ ನಾನು ಸ್ಪರ್ಧಿಸಬೇಕಾಯಿತು. ಇದು ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಆಗಿತ್ತು, ಮೊನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟು, ನಮ್ಮನ್ನು ಹೋಗಳಿದರು. ಅದು ಆತ್ಮವಿಶ್ವಾಸ ತುಂಬಿದೆ ಎಂದಿದ್ದಾರೆ.
ನಾನು ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ. ಈಗಲೂ ಚುನಾವಣೆ ನಿಲ್ಲುವ ಭಾವನೆ ನನ್ನಲ್ಲಿ ಇರಲಿಲ್ಲ. ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರು ಆತಂಕ, ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹೀಗಾಗಿ ನಾನು ಅಭ್ಯರ್ಥಿಯಾದೆ ಎಂದಿದ್ದಾರೆ.
ಜೆಡಿಎಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಇದರಿಂದ ನನಗೆ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.