ಬೆಂಗಳೂರು: ಭಾರತೀಯ ಸೇನೆ ಎನ್ ಸಿಸಿ 58ನೇ ಪ್ರವೇಶ ಯೋಜನೆ ಅಡಿಯಲ್ಲಿ ಎಸ್ಎಸ್ ಸಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 76 ಹುದ್ದೆಗಳು ಖಾಲಿ ಇದ್ದು, ಹೆಣ್ಣುಮಕ್ಕಳು, ಪುರುಷರು ಅರ್ಜಿ ಸಲ್ಲಿಸಬಹುದು. ಮಾರ್ಚ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾದ ಕಾರಣ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.
ಫೆಬ್ರವರಿ 14ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 15ರ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವವರು ಭಾರತೀಯ ಸೇನೆಯ www.joinindianarmy.nic.in ಗೆ ಭೇಟಿ ನೀಡಬಹುದಾಗಿದೆ. ಆನ್ ಲೈನ್ ಮೂಲಕವೇ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳು ಏನೇನು?
ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 19-25 ವರ್ಷದೊಳಗಿನವರಾಗಿರಬೇಕು. ಅಭ್ಯರ್ಥಿಗಳು ಎನ್ ಸಿಸಿ ಸರ್ಟಿಫಿಕೇಟ್ ಪಡೆದವರಾಗಿರಬೇಕು ಹಾಗೂ ಯಾವುದೇ ಮಾನ್ಯತೆ ಪಡೆದ ವಿವಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಎಸ್ ಎಸ್ ಬಿ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಸಂಬಳ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ 49 ವಾರಗಳವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಮಾಸಿಕ 56,100 ರೂ. ಸಂಬಳ ಇರುತ್ತದೆ. ನಿಯೋಜನೆಗೊಂಡ ಬಳಿಕ 7ನೇ ವೇತನ ಆಯೋಗದ ಅನ್ವಯ ಸಂಬಳ ನೀಡಲಾಗುತ್ತದೆ. ಉಚಿತ ವೈದ್ಯಕೀಯ ಸೌಲಭ್ಯಗಳು, ಭತ್ಯೆ, ಪಿಂಚಣಿ ಸೇರಿ ಹಲವು ಸೌಲಭ್ಯಗಳು ಸಿಗುತ್ತವೆ.
ತರಬೇತಿಯ ನಂತರ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯೋಜನೆ ಮಾಡಲಾಗುತ್ತದೆ. ವೃತ್ತಿಯಲ್ಲಿ ಬಡ್ತಿ ಪಡೆಯುತ್ತ ಹೋದರೆ, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕರ್ನಲ್, ಕರ್ನಲ್, ಬ್ರಿಗೇಡಿಯರ್, ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್ ಹಾಗೂ ಜನರಲ್ ಹುದ್ದೆಗಳು ದೊರೆಯಲಿವೆ.