ಬೆಳಗಾವಿ: 2ನೇ ಪತ್ನಿ ಬಿಟ್ಟು ತನ್ನ ಜೊತೆ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡತಿಯನ್ನು ಆಸಾಮಿಯೊಬ್ಬಾತ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬೆಳಗಾವಿ (Belagavi) ಜಿಲ್ಲೆಯ ಇಂಚಲ ಗ್ರಾಮದಲ್ಲಿ ನಡೆದಿದೆ. ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ. ರಿಯಾಜ್ ಪಠಾಣ್(30) ಕೊಲೆ ಮಾಡಿರುವ ಆರೋಪಿ ಗಂಡ. ಮೊದಲ ಪತ್ನಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶಮಾ ಪಠಾಣ್ 27 ಧಾರವಾಡದ ನಿವಾಸಿಯಾಗಿದ್ದು ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ಎಂಬಾತನನ್ನ ಮದುವೆಯಾಗಿದ್ದಳು. ಆನಂತರ ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ಬಂದಿದ್ದರು. ರಿಯಾಜ್ ರಸ್ತೆ ಬದಿಯಲ್ಲಿ ಚೆಸ್ಮಾ, ವಾಚ್ ಮಾರುವ ವ್ಯಾಪಾರ ಮಾಡುತ್ತಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ, ಈ ಸಂಸಾರಕ್ಕೆ ಮತ್ತೋರ್ವ ಮಹಿಳೆ ಎಂಟ್ರಿ ಕೊಟ್ಟಿದ್ದಾಳೆ.
ಒಂದೂವರೆ ವರ್ಷದ ಹಿಂದೆ ಹೆಂಡತಿ ಇದ್ರೂ ರಿಯಾಜ್ ಮತ್ತೊಬ್ಬಳನ್ನ ಗುಟ್ಟಾಗಿ ಮದುವೆಯಾಗಿದ್ದ. ಎರಡನೇ ಮದುವೆಯಾಗಿದ್ದ ರಿಯಾಜ್ ಕೆಲವು ತಿಂಗಳುಗಳ ಕಾಲ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಆನಂತರ ವಾರದಲ್ಲಿ ಎರಡ್ಮೂರು ದಿನ ಬರುತ್ತಿದ್ದ. ಆತನಿಗೆ ಎಷ್ಟೇ ಬುದ್ಧಿ ಹೇಳಿದರೂ ಆತ ಮಾತ್ರ ಸುಧಾರಿಸಿರಲಿಲ್ಲ. ಹೀಗಾಗಿ ಶಮಾ ತನ್ನೊಟ್ಟಿಗೆ ಇರುವಂತೆ ಒತ್ತಾಯಿಸುತ್ತಿದ್ದಳು.
ಹೀಗಾಗಿ 2ನೇ ಪತ್ನಿಯೊಂದಿಗೆ ಸೇರಿ ಸಾಯಿಸಲು ಹೊಂಚು ಹಾಕಿದ್ದ. 2ನೇ ಹೆಂಡತಿ ಉಪಾಯದಂತೆ ರಾತ್ರಿ ಮನೆಗೆ ಬಂದು ಶಮಾಳ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಮಗನೊಂದಿಗೆ ಎರಡನೇ ಹೆಂಡತಿ ಮನೆಗೆ ಹೋಗಿ ಅಲ್ಲಿಂದ ಊರು ಬಿಟ್ಟಿದ್ದಾನೆ. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.