ಲಕ್ನೋ: ಅಪ್ರಾಪ್ತ ಯುವಕನಿಗೆ ಗ್ರಾಮಸ್ಥರು ಒತ್ತಾಯ ಪೂರ್ವಕವಾಗಿ ಮೂತ್ರ ಕುಡಿಸಿರುವ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೂತ್ರ ಕುಡಿದ ಬಾಲಕನ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮೂವರು ಆರೋಪಿಗಳು ಆಲ್ಕೋಹಾಲ್ ಬಾಟಲಿಯಲ್ಲಿ ಮೂತ್ರ ತುಂಬಿಸಿ ಅದನ್ನು ನನ್ನ ಸಹೋದರನಿಗೆ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂಧಿತ ಆರೋಪಿಗಳು ಉತ್ತರ ಪ್ರದೇಶದ ರಾಂಪುರ ತ್ರಿಭೌನಾ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭೂರೆ ತಿವಾರಿ ಆ ಬಾಲಕನನ್ನು ವಾಹನದಲ್ಲಿ ಡಿಜೆ ಹಾಕಲು ಕೇಳಿದ್ದರು. ಅದರೊಂದಿಗೆ ಜನರೇಟರ್ ಅನ್ನು ಲೋಡ್ ಮಾಡಲು ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಆ ಬಾಲಕ ನಿರಾಕರಿಸಿದಾಗ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಬಾಲಕ ವಿರೋಧಿಸಿದಾಗ ಆತನನ್ನು ಥಳಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ರೀಲ್ ಮಾಡಲು ಪ್ರಯತ್ನಿಸಿದ ದಲಿತ ಹುಡುಗನಿಗೆ ಬಲವಂತವಾಗಿ ಮದ್ಯ ಕುಡಿಸಲಾಗಿತ್ತು. ರೀಲ್ ಮಾಡುವುದನ್ನು ನಿಲ್ಲಿಸುವಂತೆ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿತ್ತು.