ಬೆಂಗಳೂರು : ಕಾಂಗ್ರೆಸ್ ಪಾರ್ಟಿಯು, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ, ಸಿಎಂ ಸಿದ್ದರಾಮಯ್ಯ, ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೆಸರನ್ನು ಎಳೆದು ತಂದಿದ್ದರು.
ಸನ್ಮಾನ್ಯ ಸಿದ್ದರಾಮಯ್ಯ ನವರೇ, ದಲಿತರ ಮತ್ತು ಹಿಂದುಳಿದ ವರ್ಗದವರ ಹೆಸರಿನಲ್ಲಿ ಮಾತನಾಡುತ್ತಾ, ಬಿಜೆಪಿ ಪಕ್ಷ ಮತ್ತು ಅದರ ನಾಯಕತ್ವದ ವಿರುದ್ಧ ತಾವು ನಿರಂತರವಾಗಿ ಮಾಡುತ್ತಿರುವ ಟೀಕೆಗಳನ್ನು ನಾನು ಗಮನಿಸುತ್ತಿದ್ದೇನೆ. ಇತ್ತೀಚೆಗೆ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪರವರು ಮಾನ್ಯ ಮಲ್ಲಿಕಾರ್ಜುನ್ ಖರ್ಗೆಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು ಸೂಚಿಸಿದ್ದಕ್ಕೆ ತಾವು ತೋರಿದ ತೀವ್ರ ಪ್ರತಿಕ್ರಿಯೆ ಅತಿರೇಕವಾಗಿದೆ. ಕಾಂಗ್ರೆಸ್ ಪಕ್ಷ ಅಥವಾ ನಿಮಗೆ ಈ ವಿಷಯದಲ್ಲಿ ಬದ್ಧತೆ ಇಲ್ಲದ ಕಾರಣ ತಕ್ಷಣವೇ ಕೋಪಗೊಳ್ಳುವುದು ಅರ್ಥವಿಲ್ಲದಂತಾಗಿದೆ.
“ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷದಿಂದ ದಲಿತರ ಉದ್ಧಾರ ಸಾಧ್ಯವಿಲ್ಲದ ಮಾತು”! ನಿಮ್ಮದೇ ರಾಜಕೀಯ ಪಯಣದಲ್ಲಿ ದಲಿತ ನಾಯಕರಿಗೆ ಮಾಡಿದ ಅನ್ಯಾಯಗಳು ಜನರ ನೆನಪಿನಲ್ಲಿ ಇಂದಿಗೂ ಉಳಿದಿವೆ. ನಿಮ್ಮಂತವರ ಕೆಂಗಣ್ಣಿಗೆ ಗುರಿಯಾದ ನನ್ನಂಥವರು, ರಾಜಕೀಯವಾಗಿ ನಾಶವಾದವರು ಅನೇಕರು. ಮುಖ್ಯಮಂತ್ರಿ ಹುದ್ದೆಗೆ ಸಮರ್ಥವಾಗಿ ಅರ್ಹರಾಗಿದ್ದ ದಿ. ಬಿ. ಬಸವಲಿಂಗಪ್ಪ ರವರನ್ನು ಕಾಂಗ್ರೆಸ್ ಪಕ್ಷ ಹೇಗೆ ರಾಜಕೀಯವಾಗಿ ಕಡೆಗಣಿಸಿತು ಎಂಬುದು ಬಹುಶಃ ಹಲವರ ಜ್ಞಾಪಕದಿಂದ ಮರೆಯಾಗಿರಬಹುದು. ಆದರೆ, ಕಾಂಗ್ರೆಸ್ ನ ಇತಿಹಾಸದಲ್ಲಿ ಈ ಘಟನೆಯಿಂದ ಅಂಟಿಕೊಂಡಿರುವ ಕಳಂಕ & ಅದರ ಜವಾಬ್ದಾರಿಯು ಯಾವತ್ತೂ ಮರೆಮಾಚಲಾಗದು.
ಬಸವಲಿಂಗಪ್ಪ ರವರು ಮುಖ್ಯಮಂತ್ರಿ ಆಗಬೇಕಾದ ಸ್ಥಿತಿಯಲ್ಲಿ ಇದ್ದರೂ, ಕಾಂಗ್ರೆಸ್ ಪಕ್ಷ ಅವರಿಗೆ ಕೇವಲ ಮಂತ್ರಿಸ್ಥಾನವನ್ನೂ ನೀಡದೆ ಅವಮಾನಿಸಿದೆ. ಈ ರಾಜಕೀಯ ನಿರಾಸೆಯಿಂದ ನೊಂದ ಅವರು “ಬ್ರೈನ್ ಹೆಮರೆಜ್” ಎಂಬ ಗಂಭೀರ ಕಾಯಿಲೆಗೆ ಒಳಗಾಗಿ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದು ಇಂದಿಗೂ ಇತಿಹಾಸದ ಅಂಕಣದಲ್ಲಿ ದಾಖಲಾಗಿದೆ.
ಅವರ ಪುತ್ರರಾದ ಶ್ರೀ ಬಿ. ಪ್ರಸನ್ನಕುಮಾರ್ ರವರು ಐದು ಬಾರಿ ವಿಧಾನಸಭೆಗೆ ಆಯ್ಕೆಯಾದರೂ, ಅವರಿಗೆ ಮುಂದಿನ ರಾಜಕೀಯ ಜೀವನದಲ್ಲಿ ಅವಕಾಶ ನೀಡದ ಕಾಂಗ್ರೆಸ್, ಟಿಕೆಟ್ ನಿರಾಕರಿಸಿ ಅವರನ್ನೂ ರಾಜಕೀಯವಾಗಿ ಹಿಂಜರಿಯುವಂತೆ ಮಾಡಿ, ಈ ಕುಟುಂಬವನ್ನು ರಾಜಕೀಯವಾಗಿ ಮುಕ್ತಾಯಗೊಳಿಸಿದ ಅಪಖ್ಯಾತಿ ತನ್ನದಾಗಿಸಿಕೊಂಡಿದೆ.
ದಿ. ಶ್ರೀನಿವಾಸ ಪ್ರಸಾದ್ ರವರನ್ನು ತಾವು ಹೇಗೆ ರಾಜಕೀಯವಾಗಿ ಕೀಳಾಗಿಸಿದಿರಿ ಎಂಬುದನ್ನು ಹಾಗೂ ಪರಮೇಶ್ವರ್ ಅವರನ್ನು 8-9 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ದುಡಿಸಿ ನಂತರ ಸೋಲಿಸಿ ಮುಖ್ಯಮಂತ್ರಿಯಾಗದಂತೆ ತಡೆದು ಅವರ ಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಯ ಗಾದಿಗೆ ಹತ್ತಿದ ನಿಮ್ಮ ರೀತಿಯನ್ನು ಜನ ಮರೆತಿಲ್ಲ ಎಂದಿದ್ದಾರೆ.