ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಮೂರನೇ ಟಿ20 ಪಂದ್ಯ ಗೆಲ್ಲುವ ಮೂಲಕ ಭಾರತೀಯ ಮಹಿಳಾ ತಂಡ ಸರಣಿ ಸಮಬಲ ಮಾಡಿಕೊಂಡಿದೆ.
3 ಪಂದ್ಯಗಳ ಸರಣಿಯು 1-1 ಅಂತರದ ಸಮಬಲದೊಂದಿಗೆ ಈ ಸರಣಿ ಅಂತ್ಯವಾಗಿದೆ. ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಈ ವೇಳೆ ಭಾರತೀಯ ಬೌಲರ್ ಗಳು ಭರ್ಜರಿ ಪ್ರದರ್ಶನ ತೋರಿದರು. ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ನಾಲ್ಕನೇ ಓವರ್ನಲ್ಲಿ ಲಾರಾ (9) ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕಾ ಪಾಟೀಲ್ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಇದಾದ ನಂತರ ಪೂಜಾ ವಸ್ತ್ರಾಕರ್ ಮರಿಝನ್ನೆ ಕಪ್ (10) ಗೆ ಪೆವಿಲಿಯನ್ ಹಾದಿ ತೋರಿಸಿದರು. ಮತ್ತೊಂದೆಡೆ ದೀಪ್ತಿ ಶರ್ಮಾ ಬ್ರಿಟ್ಸ್ (20) ವಿಕೆಟ್ ಪಡೆದರು. ಅನ್ನೆಕೆ (17) ಯನ್ನು ಎಲ್ಬಿ ಬೀಳಿಸುವಲ್ಲಿ ಪೂಜಾ ವಸ್ತ್ರಾಕರ್ ಯಶಸ್ವಿಯಾದರು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 65 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೂ ಬಿಡದ ಭಾರತೀಯ ಬೌಲರ್ ಗಳು 17.1 ಓವರ್ ಗಳಿಗೆ ಎಲ್ಲ ವಿಕೆಟ್ ಪಡೆಯಿತು. ಪರಿಣಾಮ ದಕ್ಷಿಣ ಆಫ್ರಿಕಾ 84 ರನ್ ಗಳಿಸಿತು.
ಭಾರತದ ಪರ ಪೂಜಾ ವಸ್ತ್ರಾಕರ್ 3.1 ಓವರ್ಗಳಲ್ಲಿ 13 ರನ್ ನೀಡಿ 4 ವಿಕೆಟ್ ಗಳಿಸಿದರೆ, ರಾಧಾ ಯಾದವ್ 3 ಓವರ್ ಗಳಲ್ಲಿ 6 ರನ್ ನೀಡಿ 3 ವಿಕೆಟ್ ಪಡೆದರು. ಈ ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಸ್ಪೋಟಕ ಆರಂಭ ನೀಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ 40 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 54 ರನ್ ಸಿಡಿಸಿದರು. ಶಫಾಲಿ ವರ್ಮಾ ಅಜೇಯ 27 ರನ್ ಗಳಿಸಿದರು. ಟೀಮ್ ಇಂಡಿಯಾ 10.5 ಓವರ್ಗಳಲ್ಲಿ 88 ರನ್ ಬಾರಿಸಿ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 12 ರನ್ಗಳ ಜಯ ಸಾಧಿಸಿತ್ತು. 2ನೇ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಮೂರನೇ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಅದರಂತೆ ಕೊನೆಯ ಪಂದ್ಯ ಗೆದ್ದು ಭಾರತ ತಂಡ ಸರಣಿ ಸಮಬಲ ಮಾಡಿಕೊಂಡಿದೆ.