ಅಲಿಗಡ: ಭಾವೀ ಅಳಿಯನೊಂದಿಗೆ ಓಡಿಹೋಗಿ(Woman eloped with son-in-law) ಭಾರೀ ಸುದ್ದಿಯಾಗಿದ್ದ ಉತ್ತರಪ್ರದೇಶದ ಅಲಿಗಡದ ಮಹಿಳೆ ಸಪ್ನಾ ದೇವಿ ಈಗ ಮತ್ತೆ ತಮ್ಮೂರಿಗೆ ಮರಳಿದ್ದಾರೆ. ಅಲ್ಲದೆ ಅಳಿಯನೊಂದಿಗೇ ಮುಂದಿನ ಜೀವನ ನಡೆಸುವುದಾಗಿ ಪೊಲೀಸರ ಮುಂದೆ ಹೇಳಿಕೆಯನ್ನೂ ನೀಡಿದ್ದಾರೆ!
ಸಪ್ನಾ ದೇವಿ ಅವರ ಮಗಳು ಶಿವಾನಿಗೆ ರಾಹುಲ್ ಎಂಬವರ ಜೊತೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್ 16 ರಂದು ಮದುವೆ ನಡೆಯಬೇಕಿತ್ತು. ಮದುವೆಯ ಆಮಂತ್ರಣ ಪತ್ರಿಕೆಗಳನ್ನೂ ಮುದ್ರಿಸಿ ಹಂಚಲಾಗಿತ್ತು. ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದವು. ಆದರೆ, ಏಪ್ರಿಲ್ 8 ರಂದು ಅಂದರೆ ಮದುವೆಗೆ ಒಂದು ವಾರವಿರುವಂತೆಯೇ ಶಿವಾನಿಯ ತಾಯಿ ಸಪ್ನಾ ದೇವಿ, ಮನೆಯಲ್ಲಿದ್ದ ನಗದು ಮತ್ತು ಆಭರಣಗಳೊಂದಿಗೆ ಮನೆಯಿಂದ ಕಣ್ಮರೆಯಾಗಿದ್ದರು. ಅದೇ ಸಮಯದಲ್ಲಿ, ರಾಹುಲ್ ಕೂಡ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಕೊನೆಗೆ ಸಪ್ನಾ ದೇವಿಯ ಪತಿ ಜಿತೇಂದ್ರ ಕುಮಾರ್ ಅವರು ಪತ್ನಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ, ಸಪ್ನಾ ಅವರು ತಮ್ಮ ಮಗಳನ್ನೇ ಮದುವೆಯಾಗಬೇಕಾಗಿಲ್ಲ ರಾಹುಲ್ ಜೊತೆಗೆ ಓಡಿ ಹೋಗಿರುವುದು ತಿಳಿದುಬಂದಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ವ್ಯಾಪಿಸಿ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.
ಈಗ ಈ ಜೋಡಿ ಅಲಿಗಢಕ್ಕೆ ವಾಪಸ್ ಬಂದಿದ್ದು, ನೇರವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಸುಮಾರು 12 ಗಂಟೆಗಳ ಕಾಲ ಸಪ್ನಾ ದೇವಿಗೆ ಕೌನ್ಸೆಲಿಂಗ್ ಕೂಡ ಮಾಡಿದ್ದಾರೆ. ಕುಟುಂಬದವರ ಜೊತೆಗೆ ಮಾತುಕತೆ ನಡೆಸಲೂ ಅವಕಾಶ ಕಲ್ಪಿಸಿದ್ದಾರೆ. ಆದರೆ, ಸಪ್ನಾ ದೇವಿಯವರು ತಮ್ಮ ನಿರ್ಧಾರವನ್ನು ಬದಲಿಸಲ್ಲ ಎಂದಿದ್ದು, ಭಾವೀ ಅಳಿಯನಾಗಿದ್ದ ರಾಹುಲ್ ಜೊತೆಗೇ ಸಂಸಾರ ನಡೆಸುವುದಾಗಿ ದೃಢವಾಗಿ ತಿಳಿಸಿದ್ದಾರೆ. ಬೇರೆ ದಾರಿ ಕಾಣದೇ ಪೊಲೀಸರು ಜೋಡಿಯನ್ನು ಬಿಟ್ಟು ಕಳುಹಿಸಿದ್ದಾರೆ.

ನಾನು ನನ್ನ ಪತಿ ಮತ್ತು ಮಗಳಿಂದ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದೆ. ಹಾಗಾಗಿ ರಾಹುಲ್ ಜೊತೆ ಓಡಿಹೋಗಲು ನಿರ್ಧರಿಸಿದೆ ಎಂದು ಸಪ್ನಾ ದೇವಿ ಹೇಳಿಕೊಂಡಿದ್ದಾರೆ.
ಇನ್ನು ರಾಹುಲ್ ಮಾತನಾಡಿ, “ನಾನು ದೇವಿಯವರ ಬದುಕನ್ನು ಉಳಿಸಿದ್ದೇನೆ. ನಾವಿಬ್ಬರೂ ಜತೆಗೆ ಬಾಳಲು ತೀರ್ಮಾನಿಸಿದ್ದೇವೆ” ಎಂದಿದ್ದಾರೆ. ರಾಹುಲ್ ಜೊತೆ ಓಡಿ ಹೋಗುವ ವೇಳೆ ದೇವಿಯವರು ಮನೆಯಲ್ಲಿ ಮಗಳ ಮದುವೆಗೆಂದು ಉಳಿಸಿಟ್ಟಿದ್ದ ಎಲ್ಲ 3.5 ಲಕ್ಷ ರೂ. ನಗದು ಹಾಗೂ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನೂ ಒಯ್ದಿದ್ದರು.
ಈ ಕುರಿತು ಮಾತನಾಡಿರುವ ದೇವಿಯವರ ಮಗಳು ಶಿವಾನಿ, “ಏಪ್ರಿಲ್ 16ರಂದು ನಾನು ರಾಹುಲ್ ಜತೆ ವಿವಾಹವಾಗಬೇಕಿತ್ತು. ಆದರೆ ಒಂದು ವಾರ ಇರುವಂತೆಯೇ ನನ್ನ ತಾಯಿ ಅವನೊಂದಿಗೆ ಓಡಿ ಹೋದಳು. ಕಳೆದ 3-4 ತಿಂಗಳಿಂದ ನನ್ನ ಅಮ್ಮ ಮತ್ತು ರಾಹುಲ್ ಪ್ರತಿದಿನ ಬಹಳ ಹೊತ್ತು ಮೊಬೈಲ್ ನಲ್ಲೇ ಮಾತನಾಡುತ್ತಿದ್ದರು. ಆಗ ನಮಗೆ ಅನುಮಾನ ಬಂದಿರಲಿಲ್ಲ. ಅವನು ಕೇಳಿದ್ದನ್ನೆಲ್ಲ ಅವಳು ಮಾಡುತ್ತಿದ್ದಳು. ಮನೆಯಲ್ಲಿದ್ದ ಎಲ್ಲ ನಗದು ಮತ್ತು ಚಿನ್ನಾಭರಣವನ್ನು ಅಮ್ಮ ಹೊತ್ತೊಯ್ದಿದ್ದಾಳೆ. 10 ರೂಪಾಯಿಯನ್ನೂ ಬಿಟ್ಟಿಲ್ಲ. ಅವಳಿಗೇನು ಬೇಕೋ ಅದನ್ನು ಮಾಡಲಿ. ಆದರೆ, ನಮ್ಮ ಹಣ ಮತ್ತು ಆಭರಣವನ್ನು ನಮಗೆ ವಾಪಸ್ ಕೊಡಲಿ” ಎಂದಿದ್ದಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ಸಣ್ಣ ಉದ್ಯಮ ನಡೆಸುತ್ತಿರುವ ಸಪ್ನಾ ದೇವಿಯವರ ಪತಿ ಜಿತೇಂದ್ರ ಅವರು, “ನನ್ನ ಹಣ ಮತ್ತು ಆಭರಣ ವಾಪಸ್ ಕೊಡುವವರೆಗೂ ನಾನು ಅವರನ್ನು (ದೇವಿ-ರಾಹುಲ್) ಸುಮ್ಮನೆ ಬಿಡುವುದಿಲ್ಲ” ಎಂದಿದ್ದಾರೆ.



















