ಬೆಂಗಳೂರು: ಇತ್ತೀಚೆಗೆ ಹಲವರಿಗೆ ರೀಲ್ಸ್ ಹುಚ್ಚು ಹೆಚ್ಚಾಗಿ ಬಿಟ್ಟಿದೆ. ರೀಲ್ಸ್ ನಿಂದ ಹಲವರು ಹಲವಾರು ರೀತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ಈ ರೀಲ್ಸ್ ನಿಂದಾಗಿ ದಂಪತಿ ಜೈಲು ಸೇರುವಂತಾಗಿದೆ.
ಮನೆಯಲ್ಲೇ ಗಾಂಜಾ ಬೆಳೆಸಿದ್ದ ದಂಪತಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ನೇಪಾಳ (Nepal) ಮೂಲದ ಊರ್ಮಿಳಾ ಹಾಗೂ ಗುರುಂಗ್ ಎಂಬ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದಂಪತಿ ಸದಾ ಶಿವನಗರದ ಎಂಎಸ್ ಆರ್ ನಗರದಲ್ಲಿ ವಾಸಿಸುತ್ತಿದ್ದರು. ಇವರು ತಮ್ಮ ಮನೆಯ ಬಾಲ್ಕನಿಯಲ್ಲಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆಸಿದ್ದರು. ಆದರೆ, ಊರ್ಮಿಳಾ ರೀಲ್ಸ್ ಮಾಡುವಾಗ ಈ ಗಾಂಜಾ ಗಿಡ ಕೂಡ ಕಾಣಿಸಿಕೊಂಡಿದೆ. ಇದನ್ನು ಗಮನಿಸದೆ ಊರ್ಮಿಳಾ ರೀಲ್ಸ್ ಪೋಸ್ಟ್ ಮಾಡಿದ್ದಾಳೆ. ರೀಲ್ಸ್ ನೋಡುತ್ತಿದ್ದ ವ್ಯಕ್ತಿಯೋರ್ವ ಗಾಂಜಾ ಗಿಡ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹೀಗಾಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ದಂಪತಿ ಗಾಂಜಾ ಗಿಡ ಬೆಳೆಸಿದ್ದರು. ಸದ್ಯ 54 ಗ್ರಾಂ ಗಾಂಜಾ ಸೊಪ್ಪನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.