ಲಕ್ನೋ: ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವ ಆ್ಯಪಲ್ ಕಂಪನಿ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ (Steve Jobs) ಅವರ ಪತ್ನಿ ಲಾರೀನ್ ಪಾವೆಲ್ ಜಾಬ್ಸ್ ಪ್ರಯಾಗರಾಜ್ ಮಹಾಕುಂಭ ಮೇಳದಿಂದ ಮರಳಿ ಹೋಗಿದ್ದಾರೆ.
‘ಅಮೃತ ಸ್ನಾನದ ನಂತರ ಅವರು ಅಲರ್ಜಿ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ತಮ್ಮ ಸಂಗಡಿಗರೊಂದಿಗೆ ಗುರುವಾರ ವಿಶೇಷ ವಿಮಾನದಲ್ಲಿ ಪ್ರಯಾಗರಾಜ್ ನಿಂದ ಮರಳಿದ್ದಾರೆ. ಕುಂಭಮೇಳದ ಹಿನ್ನೆಲೆಯಲ್ಲಿ ವಿಶೇಷ ಕಲ್ಪವಾಸ ವೃತ ಕೈಗೊಂಡಿದ್ದು ವಿಶೇಷವಾಗಿತ್ತು.
ನಿರಂಜನ್ ಅಖಾಡದ ಸ್ವಾಮಿ ಕೈಲಾಶಾನಂದ ಗಿರಿ ಅವರಿಂದ ಮಂತ್ರ ದೀಕ್ಷೆ ಪಡೆದು, ಕೆಲವು ದಿನಗಳಿಂದ ಮಹಾಕುಂಭ ಮೇಳದಲ್ಲಿ ಲಾರೀನ್ ಭಾಗಿಯಾಗಿದ್ದರು. ಕಳೆದ ಶನಿವಾರ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅವರಿಗೆ ಸ್ವಾಮಿ ಕೈಲಾಶಾನಂದ ‘ಕಮಲಾ’ ಎಂದು ಮರು ನಾಮಕರಣ ಮಾಡಿದ್ದರು. ಮೂಲಗಳ ಪ್ರಕಾರ ಅವರು ಜನವರಿ 29ರವರೆಗೆ ಕುಂಭಮೇಳದಲ್ಲಿ ಇರಬೇಕಿತ್ತು ಎನ್ನಲಾಗಿದೆ. ಭಾರತದ ಆಧ್ಯಾತ್ಮ ವಿಚಾರಗಳು ಹಾಗೂ ಸಂಸ್ಕೃತಿಯ ಕುರಿತು ಸೂಕ್ಷ್ಮ ವಿಚಾರಗಳ ಬೋಧನೆಯನ್ನು ಅವರಿಗೆ ಮಾಡಿದ್ದರು ಎನ್ನಲಾಗಿದೆ.