ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಗುಡ್ಡ ಕುಸಿತ, ಮನೆ ಕುಸಿತ ದಂತಹ ಅವಘಡಗಳು ಆಗಾಗ ಸಂಭವಿಸುತ್ತಲೇ ಇವೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯಲ್ಲಿ ಕುಟುಂಬಸ್ಥರು ಮಲಗಿದ ವೇಳೆ ಮನೆಯ ಗೋಡೆ ಕುಸಿದು ಬಿದ್ದು, ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆ ಮನೆಯಲ್ಲಿ 6 ಜನರು ವಾಸಿಸುತ್ತಿದ್ದರು ಎನ್ನಲಾಗಿದೆ. ಅವೆರ್ಲ ರಾತ್ರಿ ಮನೆಯೊಳಗೆ ಮಲಗಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಮನೆ ಕುಸಿದಿದೆ. ಇದರಿಂದ ಒಬ್ಬರು ಮಹಿಳೆ, ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಸವಣೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
30 ವರ್ಷ ವಯಸ್ಸಿನ ಚನ್ನಮ್ಮ, ಮಕ್ಕಳಾದ ಅಮೂಲ್ಯ ಹಾಗೂ ಅನನ್ಯಾ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಪುತ್ರ ಮುತ್ತುಪ್ಪ, ಸೊಸೆ ಸುನೀತ ಹಾಗೂ ವೃದ್ಧೆ ಯಲ್ಲಮ್ಮ ಗಾಯಗೊಂಡಿದ್ದಾರೆ. 70 ವರ್ಷದ ಯಲ್ಲಮ್ಮ ಎಂಬ ವೃದ್ಧೆಯ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಾಯುಭಾರ ಕುಸಿತದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಹೇಳಿದೆ. ಶಿಥಿಲ ಕಟ್ಟಡಗಳು, ಗುಡ್ಡಗಳು ಕುಸಿಯುವ ದುರ್ಘಟನೆಗಳು ರಾಜ್ಯದಲ್ಲಿ ಹೆಚ್ಚಾಗಿವೆ.