ತುಮಕೂರು: ರಾಜ್ಯದಲ್ಲಿ ಮೈಕ್ರೋಫೈನಾನ್ಸ್ (Microfinance) ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೆಲವರು ಆತ್ಮಹತ್ಯೆಯ ಹಾದಿ ಹಿಡಿದರೆ, ಹಲವರು ಊರು ತೋರೆಯುತ್ತಿದ್ದಾರೆ. ಈ ಮಧ್ಯೆ ಕಿಲಾಡಿ ದಂಪತಿಗಳು ಸಾಲ ಪಡೆದು, ಗ್ರಾಮಸ್ಥರನ್ನು ಫಜೀತಿಗೆ ಸಿಲುಕಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮಸ್ಥರ ಹೆಸರಿನಲ್ಲಿ ಫೈನಾನ್ಸ್ ಸಾಲ
ಜಿಲ್ಲೆಯ (Tumakuru) ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಳ್ಳಿ ಗ್ರಾಮದ ಪ್ರತಾಪ್ ಹಾಗೂ ರತ್ನಮ್ಮ ಎಂಬ ದಂಪತಿ ಗ್ರಾಮಸ್ಥರ ಹೆಸರಿನಲ್ಲಿ ಸಾಲ ಮಾಡಿ, ಪರಾರಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರು ಈಗ ಮೈಕ್ರೋಫೈನಾನ್ಸ್ ಕೈಗೆ ಸಿಲುಕಿ ಒದ್ದಾಡುವಂತಾಗಿದೆ. ಗ್ರಾಮಸ್ಥರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್‌ನಿಂದ 50 ಲಕ್ಷಕ್ಕೂ ಅಧಿಕ ಮೊತ್ತದ ಸಾಲ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮದ ಸುಮಾರು 35 ಜನರ ಆಧಾರ್ ಕಾರ್ಡ್ ಪಡೆದು, 10 ಕ್ಕೂ ಹೆಚ್ಚು ಮೈಕ್ರೋಫೈನಾನ್ಸ್ ಕಂಪನಿಯಿಂದ 50 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜನರ ಹೆಸರಲ್ಲಿ ತಾವೇ ಸಾಲ ಮಂಜೂರು ಮಾಡಿಕೊಂಡು, ತಾವೇ ಸಾಲದ ಹಣ ಕಟ್ಟುತ್ತೇವೆ ಎಂದು ಪಂಗನಾಮ ಹಾಕಿ ಈಗ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆಯೇ ಪರಾರಿ
ಈ ಕಿಲಾಡಿ ದಂಪತಿ ಮೈಕ್ರೋಫೈನಾನ್ಸ್ ಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆನಂತರ ಜನರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಆ ಜನರಿಗೆ ತಾವೇ ಹಣ ಕಟ್ಟುವುದಾಗಿ ಹೇಳಿದ್ದಾರೆ. ಹೀಗೆ ಜನರನ್ನು ನಂಬಿಸಿ ಹಣ ಪಡೆದ ಕಿಲಾಡಿ ದಂಪತಿ ಎರಡು ತಿಂಗಳ ಹಿಂದೆಯೇ ಊರು ಬಿಟ್ಟಿದ್ದಾರೆ. ಇತ್ತ ಸಾಲ ಕಟ್ಟದ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಗ್ರಾಮಸ್ಥರಿಗೆ ನೋಟಿಸ್ ಬಂದಿವೆ. ಸದ್ಯ ಹಣ ಕಟ್ಟುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಗ್ರಾಮಸ್ಥರ ಹಿಂದೆ ಬಿದ್ದಿದ್ದಾರೆ. ಈಗ ಜನರು ತಮ್ಮನ್ನು ಕಾಪಾಡಬೇಕೆಂದು ಗೋಳಾಡುತ್ತಿದ್ದಾರೆ.