ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ಕರೆಯದೇ ಬಂದ ಅತಿಥಿಯೊಬ್ಬರು ಮದುವೆ ಮನೆಯಲ್ಲಿ ಕೋಲಾಹಲ ಎಬ್ಬಿಸಿದ ಘಟನೆ ನಡೆದಿದೆ. ಹಾಡು, ನೃತ್ಯ, ಸಂಭ್ರಮದಿಂದ ಕೂಡಿದ್ದ ಸ್ಥಳವು ಕ್ಷಣಕಾಲದಲ್ಲಿ ಭಯ, ಗಾಬರಿ, ಕಿರುಚಾಟದ ಗೂಡಾಗಿ ಬದಲಾಯಿತು. ಇದಕ್ಕೆ ಕಾರಣ ಕಲ್ಯಾಣಮಂಟಪಕ್ಕೆ ನುಗ್ಗಿದ ಚಿರತೆ!
ಬುಧವಾರ ರಾತ್ರಿ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಎಂಎಂ ಲಾನ್ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಮಂದಿ ಅತಿಥಿಗಳೂ ನೆರೆದಿದ್ದರು. ಇದೇ ಸಂದರ್ಭದಲ್ಲಿ ಚಿರತೆಯೊಂದು ಹಾಲ್‌ಗೆ ನುಗ್ಗಿದೆ. ಚಿರತೆಯ ಅನಿರೀಕ್ಷಿತ ಆಗಮನವನ್ನು ಕಂಡ ಜನರು ದಿಕ್ಕಾಪಾಲಾಗಿ ಓಡಿದರು. ಕೆಲವರು ಕಲ್ಯಾಣ ಮಂಟಪದ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳೂ ಆಗಿವೆ. ಇಡೀ ಮದುವೆ ಮನೆ ಚೆಲ್ಲಾಪಿಲ್ಲಿಯಾಗಿದೆ. ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಎಲ್ಲರನ್ನೂ ಹೊರಗೆ ಕಳುಹಿಸಿ, ಶೋಧ ಕಾರ್ಯ ಆರಂಭಿಸಿದರು.
ಬ್ಯಾಂಕ್ವೆಟ್ ಹಾಲ್ ನೊಳಗೆ ಪೊಲೀಸರು ರೈಫಲ್ ಗಳನ್ನು ಹಿಡಿದು ನುಗ್ಗುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿವೆ. ಪೊಲೀಸರು ಮೆಟ್ಟಿಲು ಹತ್ತುತ್ತಿದ್ದಂತೆ ಎದುರಾದ ಚಿರತೆ, ಒಂದು ಹಂತದಲ್ಲಿ ಪೊಲೀಸರಿಂದ ರೈಫಲನ್ನು ಕಿತ್ತುಕೊಳ್ಳುವ ಯತ್ನವನ್ನೂ ಮಾಡಿದೆ. ಕೊನೆಗೆ ಎಲ್ಲ ಸಿಬ್ಬಂದಿಯೂ ಸುತ್ತುವರಿದು ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಸಫಲರಾಗಿದ್ದಾರೆ. ರಾತ್ರೋರಾತ್ರಿ ಆರಂಭವಾದ ಈ ಕಾರ್ಯಾಚರಣೆ ಬೆಳಗಿನ ಜಾವ 4 ಗಂಟೆಯವರೆಗೂ ನಡೆದಿದ್ದು, ಬೆಳಗ್ಗೆ ಚಿರತೆಯನ್ನು ಬೋನಿನೊಳಗೆ ಹಾಕಿ ಕರೆದೊಯ್ಯಲಾಗಿದೆ.
“ಮಲಿಹಾಬಾದ್ ಸಮೀಪದಲ್ಲೇ ದಟ್ಟ ಅರಣ್ಯವಿದೆ. ಜೊತೆಗೆ ಲಖಿಂಪುರ್ ಖೇರಿ, ದುಧ್ವಾ ಹುಲಿ ಮೀಸಲು ಮತ್ತು ಪಿಲಿಭಿತ್ ಹುಲಿ ರಕ್ಷಿತಾರಣ್ಯವೂ ಇದೆ. ಚಿರತೆ ಚುರುಕಾದ ಪ್ರಾಣಿಯಾಗಿರುವುದರಿಂದ, ಅದು ಎಲ್ಲಿಂದ ಬೇಕಾದರೂ ಬಂದಿರಬಹುದು” ಎಂದು ಪೊಲೀಸರು ತಿಳಿಸಿದ್ದಾರೆ.