ಚಿತ್ರದುರ್ಗ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಮೀಸಲಾತಿ ವರದಿಯಲ್ಲಿ ಸತ್ಯವನ್ನು ತೆರೆದಿಟ್ಟು, ಎಲ್ಲರ ಕಥೆಯನ್ನು ಹೇಳಿದ್ದಾರೆ. ಯಾರು ಎಷ್ಟು ಜನ ಇದ್ದಾರೆ, ಅವರ ಸ್ಥಿತಿಗತಿ, ಶಿಕ್ಷಣ, ಉದ್ಯೋಗದ ಕುರಿತು, ಸರ್ಕಾರ ಅನುಷ್ಠಾನಕ್ಕೆ ತರಬೇಕಿರುವ ಯೋಗ್ಯವಾದ ವರದಿಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಆಂಜನೇಯ, ಸರ್ಕಾರ ಆ.16 ರಂದು ಚರ್ಚಿಸಿ ತೀರ್ಮಾನ ಮಾಡಿದ ತಕ್ಷಣ ಒಳಮೀಸಲಾತಿ ವರದಿಯನ್ನು ಜಾರಿಮಾಡಿ ಎಂದು ಹೇಳಿದ್ದಲ್ಲದೇ, ಸ್ವಾತಂತ್ರ್ಯ ಬಂದ ಈ ತಿಂಗಳಲ್ಲೇ ಮಾದಿಗರಿಗೆ ಸ್ವಾತಂತ್ರ್ಯ ಸಿಗಬೇಕು. ಇದಕ್ಕಾಗಿ ಉಪಸಮಿತಿ ರಚನೆ ಮಾಡಬೇಕಾಗಿಲ್ಲ. ಮಾದಿಗರು ಜನಸಂಖ್ಯೆಯಲ್ಲಿ ಶೇ.34ರಷ್ಟಿದ್ದು, ಉದ್ಯೋಗದಲ್ಲಿ ಶೇ.0.94ರಷ್ಟು ಮಾತ್ರ ಇದ್ದೇವೆ ಎಂದು ಹೇಳಿದ್ದಾರೆ.
ನಮಗೆ ಇನ್ನೂ ಒಂದು ಶೇಕಡಾ ಹೆಚ್ಚಾಗಬೇಕಾಗಿತ್ತು. ಇನ್ನು ವಿಳಂಬ ಮಾಡುವುದರಿಂದ ಅನೇಕ ನಿರುದ್ಯೋಗಿ ಯುವಕರಿಗೆ ತೊಂದರೆಯಾಗುತ್ತದೆ. ಮಾದಿಗ ಸಮುದಾಯಕ್ಕೆ ಅನುಮಾನ ಬೇಡ. ಉದ್ಯೋಗ ನೇಮಕಾತಿಯನ್ನು ತಡೆ ಹಿಡಿಯಲಾಗಿದೆ. ಮಾದಿಗರು ಮಾತನಾಡದೆ ಇದ್ದರೆ ಸಾಕು ಒಳ ಮೀಸಲಾತಿ ಜಾರಿ ಆಗುತ್ತದೆ. ಹಾಗಾಗಿ ಒಳಮೀಸಲಾತಿ ಜಾರಿ ಆಗಿಯೇ ಆಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುವರ್ಣಾವಕಾಶ ಸಿಕ್ಕಿದೆ. ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಅವರನ್ನು ಅಂಬೇಡ್ಕರ್ ರೂಪದಲ್ಲಿ ನಾವು ನೋಡುತ್ತೇವೆ. ಆ.16 ಕ್ಕೆ ನಡೆಯುವ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಆಜ್ಞೆ ಆದೇಶ ಮಾಡಿ. ನಾವು ನೊಂದು ,ಬೆಂದು ಬಳಲಿದ್ದೇವೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಈ ವರದಿ ಬಂದಿದೆ. ತಗೆದು ಕೊಳ್ಳೊಣ ಸರ್ಕಾರದ ವಿರುದ್ದ ಮಾತನಾಡುವುದು ಬೇಡ. ಇನ್ನೂ ಕೆಲವರು ಇದನ್ನು ಒಪ್ಪಿದ್ದಾರೆ ಕೆಲವರು ಮಾತಾಡುತ್ತಿದ್ದಾರೆ. ವಿರುದ್ದ ಮಾಡಿದರೆ ಅವರಿಗೆ ಪ್ರಚಾರ ಸಿಗುತ್ತದೆ ಎಂದು ಮಾತನಾಡುತ್ತಾರೊ ಅಥವಾ ಸಾಮಾಜಿಕ ನ್ಯಾಯದ ಅರಿವಿಲ್ಲದೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.



















