ಮಂಗಳೂರು: ನರೇಂದ್ರ ಮೋದಿ ಭಾನುವಾರ ಸಂಜೆ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ನಗರದಲ್ಲಿ ಕೂಡ ವಿಜಯೋತ್ಸವ ಆಚರಿಸಲಾಗಿತ್ತು. ಆದರೆ, ಈ ವೇಳೆ ನೆತ್ತರು ಹರಿದಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬೋಳಿಯಾರು ಎಂಬಲ್ಲಿ ನಡೆದಿದೆ. ಬಿಜೆಪಿ ವಿಜಯೋತ್ಸವ (BJP Celebration) ಮೆರವಣಿಗೆ ನಂತರ ನಂತರ ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದಿದ್ದಾರೆ. ಸುರೇಶ್ ಹಾಗೂ ನಂದಕುಮಾರ್ ಚಾಕು ಇರಿತಕ್ಕೊಳಗಾದವರು. ಅವರು ಬೋಳಿಯಾರು ನಿವಾಸಿಗಳಾಗಿದ್ದಾರೆ.
ವಿಜಯೋತ್ಸವ ಮುಗಿಸಿ ಸುರೇಶ್ ಮತ್ತು ನಂದಕುಮಾರ್ ಬೋಳಿಯಾರು ಪೇಟೆಯಲ್ಲಿ ಬಂದು ನಿಂತಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗ ತಂಡ ಏಕಾಏಕಿ ಬಂದು ಚಾಕುವಿನಿಂದ ಹಲ್ಲೆ ಮಾಡಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರೂ ಪಾರಾಗಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.