ಮಂಗಳೂರು: ನೆಂಟರ ಮನೆಗೆ ಬಂದಿದ್ದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ನಲ್ಲಿ ನಡೆದಿದೆ. ಡ್ಯಾಮ್‌ನ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು ಆಗಿದ್ದಾರೆ. ಎಡಪದವಿನ ಲಾರೆನ್ಸ್(20), ಮಡಂತ್ಯಾರಿನ ಸೂರಜ್ (19), ವಗ್ಗದ ಜೈಸನ್(19) ಸಾವನ್ನಪ್ಪಿರುವ ದುರ್ದೈವಿಗಳು ಎನ್ನಲಾಗಿದೆ.
ಸಾವನ್ನಪ್ಪಿರುವ ಯುವಕರು ಮೂಡುಕೋಡಿ ವಾಲ್ಟರ್ ಎಂಬುವವರ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟ ಮುಗಿಸಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನದಿಗೆ ಈಜಲು ತೆರಳಿದ್ದವರು ನೀರಿನ ರಭಸ ಹೆಚ್ಚಾಗಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನಲಾಗಿದೆ. ಒಬ್ಬರು ಇನ್ನೊಬ್ಬರ ಕೈಯನ್ನು ಹಿಡಿದುಕೊಂಡು ರಕ್ಷಣೆಗೆ ಮುಂದಾಗಿ ಮೂವರೂ ಒಟ್ಟಿಗೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ಸಹಾಯದ ಮೂಲಕ ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.