ಬೆಂಗಳೂರು: ಬಿಜೆಪಿಯಲ್ಲಿ(bjp) ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗುತ್ತಿದೆ. ಈಗ ಬಿಜೆಪಿಯಲ್ಲಿ ಮೂರನೇ ಬಣ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.
ರೆಬೆಲ್ ತಂಡ ಒಂದಾದರೆ, ಬಿವೈ ವಿಜಯೇಂದ್ರ (BY Vijayendra) ನಿಷ್ಠರ ಬಣ ಮತ್ತೊಂದು ಕಡೆ ಸಭೆ ಮಾಡುತ್ತಿದೆ. ಈ ಮಧ್ಯೆ ಬಿಜೆಪಿಯ ಮೂರನೇ ಬಣ ಪ್ರತ್ಯೇಕವಾಗಿ ಮಾಜಿ ಸಿಎಂ ಡಿವಿ ಸದಾನಂದ ಗೌಡ (DV Sadananda Gowda) ಅವರ ನಿವಾಸದಲ್ಲಿ ಸಭೆ ನಡೆಸುತ್ತಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ.
ಬುಧವಾರ ರಾತ್ರಿ ಬೆಂಗಳೂರಿನ ಸಂಜಯನಗರದಲ್ಲಿರುವ ಡಿ.ವಿ. ಸದಾನಂದ ಗೌಡ (DV Sadananda Gowda) ಅವರ ನಿವಾಸದಲ್ಲಿ ಬಿಜೆಪಿ ಒಕ್ಕಲಿಗ ಸಮುದಾಯದ ನಾಯಕರು ಗೌಪ್ಯ ಸಭೆ ನಡೆಸಿದ್ದಾರೆ. ಈ ಡಿನ್ನರ್ ಮೀಟಿಂಗ್ ನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯ ಸಿ.ಟಿ. ರವಿ(ct ravi) ಭಾಗಿಯಾಗಿದ್ದರು.
ಡಿವಿಎಸ್ ನಿವಾಸದಲ್ಲಿ ನಡೆದ ಈ ಡಿನ್ನರ್ ಮೀಟಿಂಗ್ (Dinner meeting) ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಔತಣಕೂಟದ ಸಭೆಯಲ್ಲಿ ರಾಜ್ಯ ಬಿಜೆಪಿಯಲ್ಲಿ(bjp) ನಡೆಯುತ್ತಿರುವ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗೆ ಭಿನ್ನರು ಪಟ್ಟು ಹಿಡಿದಿದ್ದು, ಈ ನಿಟ್ಟಿನಲ್ಲಿ ಪರ್ಯಾಯವಾಗಿ ನಾಯಕತ್ವ ನೀಡುವ ಸಂದರ್ಭ ಒದಗಿ ಬಂದಾಗ ಯಾರನ್ನು ಪರಿಗಣಸಬೇಕು ಎಂಬ ಕುರಿತು ಕೂಡ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,(Basavaraja Bommai) ಬಿಜೆಪಿಯಲ್ಲಿ ಸಂಘಟನಾ ಪರ್ವ ಹಾಗೂ ಚುನಾವಣಾ ಪರ್ವ ನಡೆಯುತ್ತಿವೆ. ಅವೆರಡನ್ನು ಸಮನ್ವಯಗೊಳಿಸಿ ಮೊದಲ ಹಂತದಲ್ಲಿ ಆಗುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ನಾಯಕರ ಜೊತೆ ಸಹಮತದ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸಭೆ ಮಾಡಿದ್ದೇವೆ ಎಂದಿದ್ದಾರೆ.