ಮೈಸೂರು : ಇಲ್ಲಿಯವರೆಗೆ ಗರಿಷ್ಠ ಚಳಿ ಅನುಭವಿಸಿದ ರಾಜ್ಯದ ಜನತೆಗೆ ಈಗ ಗರಿಷ್ಠ ಬಿಸಿಲಿನ ಆತಂಕ ಕಾಡುತ್ತಿದೆ. ಪ್ರತಿ ಬಾರಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಆದರೆ, ಹಲವೆಡೆ ಫೆಬ್ರವರಿ ತಿಂಗಳಲ್ಲೇ ಬಿಸಿಲು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಫೆ. 14 ರಂದು ಮೈಸೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಫೆಬ್ರವರಿಯಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಈ ಮೊದಲು ಫೆಬ್ರವರಿಯಲ್ಲಿ 30 ರಿಂದ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತಿತ್ತು.
ಹವಾಮಾನ ವೈಪರಿತ್ಯದಿಂದಾಗಿ ಈ ರೀತಿ ಬಿಸಿಲು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಫೆಬ್ರವರಿಗೆ ಹೋಲಿಸಿದರೆ ಈ ವರ್ಷ ಅತ್ಯಧಿಕ ಉಷ್ಣಾಂಶ ಜಿಲ್ಲೆಯಲ್ಲಿ ದಾಖಲಾಗಿದೆ. ಮುಂದಿನ ಐದು ದಿನ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಬಿಸಿಲಿನ ಜಳಕ್ಕೆ ಮೈವೊಡ್ಡುವುದು ಅನಿವಾರ್ಯವಾಗಿದೆ.
ಶಿವರಾತ್ರಿಗೂ ಮೊದಲೇ ತಾಪಮಾನ ಹೆಚ್ಚಾಗಿ ದಾಖಲಾಗುತ್ತಿರುವುದು ಜನರು ಆತಂಕಕ್ಕೆ ಕಾರಣವಾಗುತ್ತಿದೆ. ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕೂಡ ತಾಪಮಾನ ಹೆಚ್ಚಾಗಿದೆ.