ವಿಜಯಪುರ: ಬೆಂಕಿ ಬಬಲಾದಿ ಸದಾಶಿವ ಚಿಕ್ಕಯ್ಯ ಮುತ್ಯಾನ ಕಾಲಜ್ಞಾನವದ 2025ರ ಭವಿಷ್ಯವಾಣಿಯನ್ನು ಹೊಳಿಬಬಲಾದಿಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೊಳಿಮಠ ನುಡಿದಿದ್ದಾರೆ.
ಅವರು, ರಾಜ್ಯ- ದೇಶದ ರಾಜಕೀಯ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಈ ಮಠದ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಂದು ಆರಂಭವಾಗಲಿದೆ. ಶಿವರಾತ್ರಿ ಅಮಾವಾಸ್ಯೆ ನಂತರ ಸದಾಶಿವ ಮುತ್ಯಾನ ಕಾಲಜ್ಞಾನ ನುಡಿಯಲಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಕಾಲಜ್ಞಾನ ನುಡಿಯಲಾಗಿದ್ದು, ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಿ ಅಣ್ಣ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಆಗ್ತಾವೆ. ಹಣ- ಹಣದ ಹಿಂದೆ ಹೋಗುವರ ಬಂಧುತ್ವ ಸಮಯ ತಿಳಿಯಿರಣ್ಣ. ಈ ವರ್ಷ ವಿದ್ಯುಚ್ಛಕ್ತಿ, ನೀರಿನ ಕೊರತೆ ಬಹಳ ಆಗುತ್ತದೆ ಎಂದು ಕಾಲಜ್ಞಾನ ಬರದ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗುತ್ತೆ. ಭೂಕಂಪ, ಅಗ್ನಿ ದುರಂತಗಳು ಜಾಸ್ತಿ ಆಗುತ್ತವೆ. ಧರ್ಮ- ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ಈ ವರ್ಷದಲ್ಲಿ ಮಾನವೀಯತೆ ಮನುಷ್ಯತ್ವದ ಹೊಸ ಸಂಚಲನ ಮೂಡಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳಿ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಮಠವಿದ್ದು, ಇದು ಕಾಲಜ್ಞಾನದಿಂದಲೇ ಪ್ರಸಿದ್ಧಿಯಾಗಿದೆ.