ಉತ್ತರ ಕನ್ನಡ: ಸೋಶಿಯಲ್ ಮೀಡಿಯಾದಲ್ಲಿ ಮಿಂಚಬೇಕು, ಓವರ್ ನೈಟ್ ಸ್ಟಾರ್ ಆಗಬೇಕು ಅನ್ನೋದು ಇಂದಿನ ಯುವಜನತೆಯ ದೊಡ್ಡ ಕನಸು. ಆದರೆ, ತಮ್ಮ 90ನೇ ವಯಸ್ಸಿನಲ್ಲಿಯೇ ದೇಶದ ಅತ್ಯಂತ ಹಿರಿಯ ‘ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್’ ಆಗಿ ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದ್ದ ನಮ್ಮೆಲ್ಲರ ಪ್ರೀತಿಯ ಲಕ್ಷ್ಮೀ ಅಜ್ಜಿ ಇನ್ನಿಲ್ಲ ಎಂಬ ಕಹಿ ಸುದ್ದಿ ಇದೀಗ ಹೊರಬಿದ್ದಿದೆ. ತಮ್ಮ ಮುಗ್ಧ ನಟನೆಯಿಂದ ಇಡೀ ಕರುನಾಡನ್ನೇ ನಗಿಸುತ್ತಿದ್ದ ಅಜ್ಜಿಯ ಅಗಲಿಕೆಗೆ ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯವರಾದ, ಜೀ ಕನ್ನಡದ ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ ಆಚಾರಿ ಅವರ ಸ್ವಂತ ಮುತ್ತಜ್ಜಿ ಲಕ್ಷ್ಮೀ ಮಾಸ್ತಪ್ಪ ನಾಯ್ಕ್ (92) ಅವರು ಇಂದು ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಮರಿಮೊಮ್ಮಗನ ಜೊತೆ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಈ ಅಜ್ಜಿಯ ಅಗಲಿಕೆ ಸೂರಜ್ ಕುಟುಂಬಕ್ಕೆ ಮಾತ್ರವಲ್ಲ, ಲಕ್ಷಾಂತರ ಫಾಲೋವರ್ಸ್‌ಗೂ ದೊಡ್ಡ ಆಘಾತ ತಂದಿದೆ.

ಬಾಲ್ಯದಿಂದಲೇ ಹಾಡು ಮತ್ತು ನಾಟಕದ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದ ಲಕ್ಷ್ಮೀ ಅಜ್ಜಿಗೆ, ಆಗಿನ ಕಾಲದಲ್ಲಿ ಆಸರೆ ಸಿಕ್ಕಿರಲಿಲ್ಲ. ಆದರೆ, ಮರಿಮೊಮ್ಮಗ ಸೂರಜ್ ಮೂಲಕ ತಮ್ಮ 90ನೇ ವಯಸ್ಸಿನಲ್ಲಿ ಈ ಅಜ್ಜಿ ಬಣ್ಣ ಹಚ್ಚಿದ್ದರು. ಕಣ್ಣು ಮಂಜಾಗಿದ್ದರೂ, ಕಿವಿ ಸರಿಯಾಗಿ ಕೇಳಿಸದಿದ್ದರೂ ಮರಿಮೊಮ್ಮಗ ಹೇಳಿಕೊಟ್ಟಂತೆ ನೈಜವಾಗಿ ನಟಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿದ್ದರು. ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎನ್ನುವುದನ್ನು ಪ್ರೂವ್ ಮಾಡಿ, ಯುವಕರಿಗೂ ಸ್ಫೂರ್ತಿಯಾಗಿದ್ದ ಈ ಅಜ್ಜಿಯ ಜೀವನೋತ್ಸಾಹ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿತ್ತು.
ಲಕ್ಷ್ಮೀ ಮಾಸ್ತಪ್ಪ ನಾಯ್ಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಆಗಿದ್ದರು ಅಂದರೆ, ಸೂರಜ್ ಹೊಸ ರೀಲ್ಸ್ ಹಾಕಿದಾಗ ಅದರಲ್ಲಿ ಅಜ್ಜಿ ಇಲ್ಲದಿದ್ದರೆ, “ನಮ್ಮ ಅಜ್ಜಿ ಯಾಕಿಲ್ಲ?” ಎಂದು ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಅಷ್ಟರಮಟ್ಟಿಗೆ ಈ ಅಜ್ಜಿಯ ಮುಗ್ಧ ನಟನೆ ಕನ್ನಡಿಗರಿಗೆ ಕನೆಕ್ಟ್ ಆಗಿತ್ತು. ಆದರೆ, ಇನ್ಮುಂದೆ ಸೂರಜ್ ವಿಡಿಯೋಗಳಲ್ಲಿ ಅಜ್ಜಿ ಎಂದೆಂದಿಗೂ ಕಾಣಸಿಗುವುದಿಲ್ಲ ಎನ್ನುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.



















