ಬೆಂಗಳೂರು: ಮಲತಂದೆಯೊಬ್ಬ ತನ್ನ ಅಪ್ರಾಪ್ತ ಮಗಳೊಂದಿಗೆ ಸೇರಿ ಸೈಕಲ್ ಕದ್ದು ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಂದೆಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಫಯಾಜ್ ಉದ್ದೀನ್ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಅಪ್ರಾಪ್ತೆ ಮಗಳನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದಳು ಎನ್ನಲಾಗಿದೆ.
ಈತ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಸೈಕಲ್ ಕದಿಯುತ್ತಿದ್ದ. ಪೊಲೀಸರು ತಂದೆ-ಮಗಳ ಕೃತ್ಯ ಬಯಲು ಮಾಡಿದ್ದು, ತಂದೆ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ, ಅಪ್ರಾಪ್ತೆ ಮೇಲೆ ಕೂಡ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಅಪಾರ್ಟ್ ಮೆಂಟ್ ಗಳಿಗೆ ಹೋಗಿ ಲಾಕ್ ಮಾಡದಿರುವ ಸೈಕಲ್ ಗಳನ್ನು ಈ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಆರೋಪಿ ಮೊಹಮ್ಮದ್ ಸೈಕಲ್ ಕಳ್ಳತನಕ್ಕೆ ಅಪ್ರಾಪ್ತೆ ಮಗಳನ್ನು ಕರೆದೊಯ್ಯುತ್ತಿದ್ದ. ಮಗಳು ಸೈಕಲ್ ತುಳಿದುಕೊಂಡು ಬಂದರೆ ಅನುಮಾನ ಬರುತ್ತಿರಲಿಲ್ಲ ಎಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಗಳನ್ನು ಸೈಕಲ್ ಕದಿಯಲು ಕರೆದೊಯ್ಯುತ್ತಿದ್ದ. ಸದ್ಯ ಒಟ್ಟು 22 ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.