ಬೆಂಗಳೂರು: ರಾಜ್ಯದ ಶಕ್ತಿ ಸೌಧ ಈಗ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿದೆ.
ಹೌದು, ಬೆಂಗಳೂರಿನ ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತವಾಗಲಿದೆ. ಪ್ರವಾಸೋದ್ಯಮ ಇಲಾಖೆ ಮನವಿ ಪುರಸ್ಕರಿಸಿರುವ ಸರ್ಕಾರ ಇನ್ಮುಂದೆ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳುತ್ತಿದೆ. ವಿಶೇಷ ಅಂದ್ರೆ ವಿಧಾನಸೌಧ ದರ್ಶನ ಭಾಗ್ಯಕ್ಕೆ ಶುಲ್ಕ ನಿಗದಿ ಮಾಡಲಾಗುತ್ತಿದೆ. ಆನ್ ಲೈನ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ದೃಢೀಕರಣಿ, ದರ್ಶನದ ಟಿಕೆಟ್ ಪಡೆಯಬಹುದಾಗಿದೆ.
ಸದ್ಯಕ್ಕೆ ಪ್ರವಾಸೋದ್ಯಮ ಇಲಾಖೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಮಾರ್ಗದರ್ಶಕರ ಸಹಿತ ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. 30 ಜನರ ತಂಡದೊಂದಿಗೆ ಪ್ಯಾಕೇಜ್ ಟೂರ್ ಗೂ ಅವಕಾಶ ಕಲ್ಪಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧವನ್ನು ಇನ್ನು ಮುಂದೆ ಪ್ರವಾಸಿಗರು ಕೇವಲ ಹೊರಗಿನಿಂದ ಮಾತ್ರವಲ್ಲ, ಒಳಗೂ ಹೋಗಿ ವೀಕ್ಷಿಸಬಹುದು. ವಿಧಾನಸೌಧದ ವಾಸ್ತುಶಿಲ್ಪ, ಭವ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಸಮೀಪದಿಂದ ಅನುಭವಿಸುವ ಅವಕಾಶವೊಂದು ಸಾರ್ವಜನಿಕರಿಗೆ ಸಿಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಸಂಪೂರ್ಣ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡ ಈ ವೀಕ್ಷಣೆಗೆ ‘ಗೈಡ್ ಟೂರ್’ ಎಂದು ಹೆಸರಿಡಲಾಗಿದೆ. ಆದರೆ, ಈ ಅವಕಾಶ ಸಾರ್ವತ್ರಿಕ ರಜಾದಿನಗಳಂದು ಮಾತ್ರ ಇರಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಧಾನಸೌಧ ‘ಗೈಡ್ ಟೂರ್’ಗೆ ಪ್ರವೇಶ ಶುಲ್ಕವೂ ಇರಲಿದೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಶುಲ್ಕ ಮತ್ತು ಪ್ರವೇಶ ಮಾರ್ಗಸೂಚಿಗಳು ಶೀಘ್ರದಲ್ಲೇ ಪ್ರಕಟವಾಗಲಿದೆ. ವಿಧಾನಸೌಧಕ್ಕೆ ಈಗಾಗಲೇ ಸಂಜೆ ವೇಳೆ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು ವೀಕ್ಷಣೆಗೆ ಬರುವ ಸಾರ್ವಜನಿಕರ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ದೇಶದ ಹಾಗೂ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ವಿಧಾನಸೌಧದ ಒಳಗೆ ‘ಗೈಡ್ ಟೂರ್’ ಮಾಡಲು ಸರ್ಕಾರ ಮುಂದಾಗಿದೆ.
30 ತಂಡಗಳಿಗೆ ಅವಕಾಶ
ಬೆಳಗ್ಗೆ ಎಂಟು ಗಂಟೆಯಿಂದ ಗೈಡ್ ಟೂರ್ ಆರಂಭಗೊಳ್ಳಲಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ತಲಾ 30 ಮಂದಿಯ ತಂಡಗಳನ್ನಾಗಿ ವಿಂಗಡಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಅಧಿಕಾರಿಯೊಬ್ಬರು ನಿಯೋಜನೆಯಾಗಲಿದ್ದಾರೆ.
ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ (ಕಾರ್ಯಕಾರಿ) ಹಾಗೂ ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾದಿನವೇ ಸಲ್ಲಿಸಬೇಕಾಗುತ್ತದೆ. ಪ್ರವಾಸಿಗರಿಗೆ ಆನ್ಲೈನ್ ಮೂಲಕ ಟಿಕೆಟ್ ವಿತರಣೆಯಾಗಲಿದ್ದು, ಅದಕ್ಕಾಗಿ ಆ್ಯಪ್ ಶೀಘ್ರ ಬಿಡುಗಡೆಯಾಗಲಿದೆ.
ಪ್ರವೇಶ ಶುಲ್ಕವು ದುಬಾರಿಯಾಗಿರಬಾರದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ ಹಾಗೂ ವಿಧಾನಸೌಧ ಭದ್ರತೆ ವಿಭಾಗದ ಉಪ ಪೊಲೀಸ್ ಆಯುಕ್ತರು ಭದ್ರತೆಯ ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಆಗುವ ರೀತಿಯಲ್ಲಿ ರೂಟ್ ಮ್ಯಾಪ್ ಸಿದ್ಧಗೊಳ್ಳಲಿದ್ದು ಅದಕ್ಕೆ ತಕ್ಕದಾಗಿ ಮಾತ್ರ ಸಂಚರಿಸಬೇಕಾಗುತ್ತದೆ.
ಯಾವಾಗ ಜಾರಿಗೆ?
ಸರ್ಕಾರವು ಈ ಯೋಜನೆಯನ್ನು 2025ರ ಮಧ್ಯಭಾಗದ ವೇಳೆಗೆ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದ್ದು, ಶೀಘ್ರವೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.