ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಮುದ್ರಾಂಕ ಶುಲ್ಕವನ್ನು ಏರಿಸುವ ಮೂಲಕ ಜನರಿಗೆ ಬೆಲೆಯೇರಿಕೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರವೀಗ ಮತ್ತೊಂದು ಬೆಲೆಯೇರಿಕೆ ಬರೆಯನ್ನು ಎಳೆದಿದೆ. ಹೌದು, ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಇರುವ ಶುಲ್ಕವನ್ನು ರಾಜ್ಯ ಸರ್ಕಾರವು ಬರೋಬ್ಬರಿ 10 ಪಟ್ಟು ಹೆಚ್ಚಿಸುವ ಮೂಲಕ ರಾಜ್ಯ ಜನರಿಗೆ ಶಾಕ್ ನೀಡಿದೆ. ಮೆಟ್ರೋ ಬೆಲೆಯೇರಿಕೆ ಮಧ್ಯೆಯೇ ಮತ್ತೊಂದು ಬೆಲೆಯೇರಿಕೆ ಹೊಡೆತಕ್ಕೆ ರಾಜ್ಯದ ಜನ ಸಿಲುಕಿದ್ದಾರೆ.
ರಾಜ್ಯ ಸರ್ಕಾರವು “ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು (ತಿದ್ದುಪಡಿ) 2024ರ ಅನ್ವಯ ಇತ್ತೀಚೆಗೆ ಬೆಲೆಯೇರಿಕೆ ಮಾಡಿದೆ. ಇದಕ್ಕೂ ಮೊದಲು ಜನನ ಹಾಗೂ ಮರಣ ಪ್ರಮಾಣಪತ್ರದ ಒಂದು ಪ್ರತಿ ತೆಗೆದುಕೊಳ್ಳಲು 5 ರೂ. ಆಗುತ್ತಿತ್ತು. ಈಗ ಆ ಶುಲ್ಕವನ್ನು 10 ಪಟ್ಟು ಅಂದರೆ, 50 ರೂಪಾಯಿ ತೆತ್ತು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಜನನ ಹಾಗೂ ಮರಣ ಪ್ರಮಾಣಪತ್ರಗಳು ಹಲವು ಕಾರಣಗಳಿಗೆ ಬೇಕಾಗುತ್ತದೆ. ಮಕ್ಕಳ ಜನನ ಪ್ರಮಾಣಪತ್ರವನ್ನು ಪೋಷಕರು ಶಾಲೆಗಳಿಗೆ ಪ್ರವೇಶಾತಿಗೆ, ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ಸಲ್ಲಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಆತನ ಕುಟುಂಬಸ್ಥರಿಗೆ ವಿವಿಧ ಕಾರಣಗಳಿಗಾಗಿ ಮರಣ ಪ್ರಮಾಣಪತ್ರ ಬೇಕಾಗುತ್ತದೆ. ಈಗ ಏಕಾಏಕಿ ಶುಲ್ಕವನ್ನು 10 ಪಟ್ಟು ಹೆಚ್ಚಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಆಯಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗದ ಜನನ ಹಾಗೂ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯದ ಆದೇಶದ ಮೂಲಕ ಪಡೆಯುವ “ಅಲಭ್ಯ ಪ್ರಮಾಣಪತ್ರ’’ದ ಶುಲ್ಕವನ್ನೂ 10 ಪಟ್ಟು ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಒಂದು ವರ್ಷಕ್ಕೆ 2 ರೂಪಾಯಿ ಇತ್ತು. ಈಗ ಅದನ್ನು 20 ರೂಪಾಯಿಗೆ ಏರಿಕೆ ಮಾಡಲಾಗಿದೆ.