ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಮೂವರು ಡಿವೈಎಸ್ಪಿಗಳನ್ನು ಒಳಗೊಂಡ ತಂಡವು ಕೋವಿಡ್ ಹಗರಣದ ತನಿಖೆ ನಡೆಸಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೋವಿಡ್ ಹಗರಣದ ಸಂಬಂಧ ಎಫ್ಐಆರ್ ದಾಖಲಾದ ಎರಡು ತಿಂಗಳ ಬಳಿಕ ರಾಜ್ಯ ಸರ್ಕಾರವು ಕೊನೆಗೂ ಸಿಐಡಿ ತನಿಖೆಗೆ ಆದೇಶಿಸಿದೆ. ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಎನ್ 95 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಸೇರಿದಂತೆ ಹಲವು ಉಪಕರಣಗಳ ಖರೀದಿಯ ವೇಳೆ ಸುಮಾರು 167 ಕೋಟಿ ರೂ. ಹಗರಣ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಅವರು ದೂರು ನೀಡಿದ್ದರು. ಕಳೆದ ಡಿಸೆಂಬರ್ 13ರಂದು ವಿಧಾನಸೌಧ ಠಾಣೆಯಲ್ಲಿ ದೂರು ನೀಡಲಾಗಿತ್ತು.
ದೂರು ದಾಖಲಾದ ಬಳಿಕ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಪಿಜಿ ಗಿರೀಶ್, ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜೆ.ಪಿ. ರಘು, ಚುನಾಯಿತ ಜನಪ್ರತಿನಿಧಿಗಳು ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲಾದರೂ ಸರ್ಕಾರವು ಉನ್ನತ ತನಿಖೆಗೆ ಆದೇಶಿಸಿರಲಿಲ್ಲ.
ಎಸ್ಐಟಿ ತನಿಖೆಗೆ ಏಕೆ ವಹಿಸಿಲ್ಲ?
ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕರು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಿದರು. ಇದಾದ ಬಳಿಕವೇ ರಾಜ್ಯ ಸರ್ಕಾರವು ಕೋವಿಡ್ ಹಗರಣದ ತನಿಖೆಗೆ ತೀರ್ಮಾನಿಸಿತ್ತು. ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ತೀರ್ಮಾನಿಸಲಾಗಿತ್ತು. ಹಾಗೆ ನೋಡಿದರೆ, ಪ್ರಕರಣದ ತನಿಖೆಯನ್ನು ಎಸ್ಐಟಿಗೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿ ಹಲವರ ಹೆಸರು ಪ್ರಸ್ತಾಪವಾದ ಕಾರಣ ತನಿಖೆಗೆ ಎಸ್ಐಟಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿ, ಸಿಐಡಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.