ಬೆಂಗಳೂರು: ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದು ಸಾಲ ತೀರಿಸಲು ಆಗದೆ ಜನರು ಒದ್ದಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಹೀಗಾಗಿಯೇ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ ಸರ್ಕಾರದ ಸಾಲ ಹಾಗೂ ಬಡ್ಡಿಯ ವಿಷಯ ಕೂಡ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಸಾಲದಲ್ಲೂ ದಾಖಲೆ ಬರೆಯುವ ಮೂಲಕ ಪ್ರಜೆಗಳಿಗೆ ದೊಡ್ಡ ಋುಣಭಾರ ಇಟ್ಟಿದೆ. ರಾಜ್ಯ ಸರ್ಕಾರದ ಋುಣಭಾರ ಈಗಾಗಲೇ 6 ಲಕ್ಷ ಕೋಟಿ ರೂ. ಮೀರಿದೆ.
ಅಲ್ಲದೇ, ಈ ವರ್ಷದ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 6.65 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ. ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚಳವಾಗುತ್ತಿದ್ದು, ಅಸಲು ಪಾವತಿಗಿಂತ ಬಡ್ಡಿ ಪಾವತಿಸುವುದೇ ಹೆಚ್ಚಾಗುತ್ತಿದೆ. ಸಾಲ ಪ್ರಮಾಣವು ದಾಖಲೆ ಗಾತ್ರದಲ್ಲೇ ಏರಿಕೆಯಾಗುತ್ತಿದೆ. ಪ್ರಸಕ್ತ 2024-25ನೇ ಸಾಲಿನಲ್ಲಿ 1.05 ಲಕ್ಷ ಕೋಟಿ ರೂ. ಸಾಲ ಪಡೆಯಲು ಮುಂದಾಗಿರುವ ಸರ್ಕಾರ, 2025-26ನೇ ಸಾಲಿಗೆ ಅದಕ್ಕಿಂತಲೂ ಹೆಚ್ಚು ಸಾಲ ಪಡೆಯಲು ಅವಕಾಶ ಮಾಡಿಕೊಳ್ಳುವುದು ಖಚಿತವಾಗಿದೆ.
2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲ ಪ್ರಮಾಣ 5.80 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಜತೆಗೆ ಪ್ರಸಕ್ತ ವರ್ಷವೂ 1.05 ಲಕ್ಷ ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದ ಒಟ್ಟು ಸಾಲ 6.65 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ವಾರ್ಷಿಕ ಬಡ್ಡಿ ರೂಪದಲ್ಲಿ ಸರಕಾರ 37,324 ಕೋಟಿ ರೂ. ಪಾವತಿಸಬೇಕಿದೆ. 2024-25ನೇ ಸಾಲಿನಲ್ಲಿ ಪಡೆಯುತ್ತಿರುವ ಸಾಲದ ಶೇ.35ರಷ್ಟು ಹಣವನ್ನು ಬಡ್ಡಿ ಪಾವತಿಗೆ ಬಳಸಬೇಕು. ಅಲ್ಲದೇ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 25,228 ಕೋಟಿ ರೂ. ಅಸಲು ಪಾವತಿಗೂ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ರಾಜ್ಯದ ಒಟ್ಟು ದೇಶೀಯ ಉತ್ಪನ್ನ (ಜಿಎಸ್ಡಿಪಿ) ಪ್ರಮಾಣದ ಶೇ.25ರ ಮಿತಿಯೊಳಗೆ ರಾಜ್ಯ ಸರಕಾರ ಸಾಲ ಪಡೆಯಲು ಅವಕಾಶವಿರುತ್ತದೆ. ಮುಂದಿನ 2025-26ನೇ ಸಾಲಿಗೆ ಜಿಎಸ್ಡಿಪಿ ಪ್ರಮಾಣ ಹೆಚ್ಚಾಗಲಿರುವುದರಿಂದ ಮುಂದಿನ ಬಾರಿಯೂ ದಾಖಲೆ ಮೊತ್ತದ ಸಾಲ ಪಡೆಯಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.